ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಂಬೇಡ್ಕರ್ ಮೈದಾನ ಮತ್ತು ರಂಗಮಂದಿರ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಪ್ರಮುಖ ತಾಣ. ರಾಜ್ಯ, ರಾಷ್ಟ್ರ ಮಟ್ಟದ ಕಬಡ್ಡಿ ಪಟುಗಳನ್ನು ಕ್ರೀಡಾ ಜಗತ್ತಿಗೆ ನೀಡಿದ ಈ ಮೈದಾನಕ್ಕೆ ಹಲವು ದಶಕಗಳ ಇತಿಹಾಸವಿದೆ. 6 ದಶಕಗಳಿಂದ ನಡೆಯುತ್ತಿರುವ ಮೊಸರುಕುಡಿಕೆ ಉತ್ಸವದ ಪ್ರಮುಖ ಆಕರ್ಷಣೆಯೇ ಅಂಬೇಡ್ಕರ್ ಮೈದಾನ. ಆದರೆ ಸಾಂಸ್ಕೃತಿಕ ಕ್ರೀಡೆಯ ತಾಣವಾಗಿದ್ದ ಈ ಮೈದಾನ ಪಾಳುಬಿದ್ದ ಸ್ಥಿತಿಯಲ್ಲಿದ್ದು, ನಗರಾಡಳಿತ ಮತ್ತು ಜನಪ್ರತಿನಿಧಿಗಳು ಈ ಮೈದಾನಕ್ಕೆ ಕಾಯಕಲ್ಪ ನೀಡಲು ಮುಂದಾಗಬೇಕಾಗಿದೆ.
ಏಳೆಂಟು ದಶಕಗಳ ಹಿಂದೆ ತೊಕ್ಕೊಟ್ಟು ಸಹಿತ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಒಳಪೇಟೆಯ ಆಂಬೇಡ್ಕರ್ ಮೈದಾನ ವಿವಿಧ ರೀತಿಯ ಮನೋರಂಜನ ತಾಣವಾಗಿತ್ತು. ತೊಕ್ಕೊಟ್ಟಿನ ವಿವಿಧ ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ತೊಕ್ಕೊಟ್ಟಿನ ಮೊಸರುಕುಡಿಕೆ, ಕೃಷ್ಣ ವೇಷ ಸ್ಪರ್ಧೆ, ದೀಪಾವಳಿ, ಗೂಡು ದೀಪ ಸಹಿತ ವಿವಿಧ ಧರ್ಮಗಳ ಸೌಹಾರ್ದ ಕಾರ್ಯಕ್ರಮಗಳಿಗೆ ಪ್ರಮುಖ ತಾಣವಾಗಿತ್ತು. ಹೊರ ಜಿಲ್ಲೆಗಳಿಂದ ಬರುವ ಕಲಾವಿದರಿಗೆ ತಮ್ಮ ಪ್ರತಿಭೆಯ ಆನಾವರಣಕ್ಕೆ ಅಂಬೇಡ್ಕರ್ ಮೈದಾನ ಮತ್ತು ಅಂಬೇಡ್ಕರ್ ಸಭಾಂಗಣ ಒಂದು ಉತ್ತಮ ವೇದಿಕೆಯಾಗಿತ್ತು.
ಸ್ಥಳೀಯ ಕ್ರೀಡಾ ಸಂಸ್ಥೆಗಳು ಮತ್ತು ಯುವಕ ಸಂಘಗಳು ರಾಜ್ಯ, ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಇದೆ ಮೈದಾನದಲ್ಲಿ ಆಯೋಜಿಸುವ ಮೂಲಕ ಕಬಡ್ಡಿ ಕ್ರೀಡಾಪಟುಗಳ ಅಖಾಡ ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಅಂಬೇಡ್ಕರ್ ಮೈದಾನ ಮತ್ತು ರಂಗ ಮಂದಿರ ಪುನರ್ ನಿರ್ಮಾಣಕ್ಕೆ 2019ರಲ್ಲಿ 1 ಕೋಟಿ ರೂ. ವಿಶೇಷ ಅನುದಾನ ನಗರಸಭೆಯಿಂದಮೀಸಲಿಟ್ಟಿತ್ತು. ಕೆಲವೊಂದು ತಾಂತ್ರಿ ಸಮಸ್ಯೆ ಮತ್ತು ಯೋಜನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಶೆಷ ಅನುದಾನದಲ್ಲಿ ಪುನರ್ ನಿರ್ಮಾಣ ಕಾರ್ಯ ಆಗಿರಲಿಲ್ಲ ಎನ್ನುತ್ತಾರೆ ನಗರಸಭೆಯ ಅಧಿಕಾರಿಯೊಬ್ಬರು. ಬಳಿಕ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ಇದೀಗ ಮೈದಾನ ಅವ್ಯವಸ್ಥಿತವಾಗಿ ಕೆಸರುಮಯವಾಗಿದ್ದರೆ, ಪಕ್ಕದಲ್ಲೇ ಇರುವ ಅಂಬೇಡ್ಕರ್ ರಂಗಮಂದಿರ ದುರಸ್ತಿ ಕಾಣದೆ ಕುಸಿಯುವ ಭೀತಿಯಲ್ಲಿದೆ. ರಂಗಮಂದಿರದ ಅವ್ಯವಸ್ಥೆಯಿಂದಾಗಿ ಇಲ್ಲಿ ಕಾರ್ಯಕ್ರಮಗಳು ನಡೆಯುವುದೇ ನಿಂತು ಹೋಗಿದೆ.
ಚರಂಡಿ ಚಪ್ಪಡಿಕಲ್ಲು ಸರಿಪಡಿಸಲು ಕ್ರಮ
ಅಂಬೇಡ್ಕರ್ ರಂಗಮಂದಿರ ಮತ್ತು ಮೈದಾನವನ್ನು ಸಾಂಸ್ಕೃತಿಕ ಚಟುವಟಿಕೆ ಮತ್ತು ಕಬಡ್ಡಿಗೆ ಪೂರಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ತುರ್ತು ಕಾಮಗಾರಿಯಾಗಿ ಮೈದಾನದ ಸುತ್ತುಮತ್ತಲಿನ ಚರಂಡಿ ಚಪ್ಪಡಿಕಲ್ಲು ಸರಿಪಡಿಸುವ ಕಾರ್ಯ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ.
-ವಾಣಿ ವಿ. ಆಳ್ವ , ಮುಖ್ಯಾಧಿಕಾರಿ, ಉಳ್ಳಾಲ ನಗರಸಭೆ
ಅಭಿವೃದ್ಧಿಪಡಿಸಿ
ತೊಕ್ಕೊಟ್ಟಿನ ಅಂಬೇಡ್ಕರ್ ರಂಗಮಂದಿರ ಮತ್ತು ಮೈದಾನವನ್ನು ಉಳ್ಳಾಲದ ಮಹಾತ್ಮಾಗಾಂಧಿ ರಂಗಮಂದಿರದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಒಳಾಂಗಣ ಕಬಡ್ಡಿ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರಕವಾಗಿ, ಸ್ಥಳೀಯ ವಾಣಿಜ್ಯ ಸಂಕೀರ್ಣಗಳಿಗೆ ತೊಂದರೆಯಾಗದ ರೀತಿಯಲ್ಲಿ ಸ್ಥಳೀಯ ಕ್ರೀಡಾ, ಸಾಂಸ್ಕೃತಿಕ ಸಂಘಟಕರ ಸಮಿತಿ ಮಾಡಿ ತಜ್ಞ ಎಂಜಿನಿಯರ್‌ಗಳ ಸಲಹೆ ಪಡೆದು ಅಭಿವೃದ್ಧಿಪಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು.
-ಸಿರಿಲ್ ರಾಬರ್ಟ್ ಡಿ’ಸೋಜಾ, ಪ್ರ. ಕಾರ್ಯದರ್ಶಿ ಉಳ್ಳಾಲ ತಾ| ಅಮೆಚೂರು ಕಬಡ್ಡಿ ಅಸೋಸಿಯೇಶನ್
ರಂಗ ಚಟುವಟಿಕೆ, ಕಬಡ್ಡಿ ಆಟಕ್ಕೆ ಆದ್ಯತೆ ನೀಡಲಿ
ರಂಗಮಂದಿರ ಪುನರ್ ನಿರ್ಮಾಣ ಅತೀ ಅವಶ್ಯಕ. ಸಾಂಸ್ಕೃತಿಕ ಚಟು ವಟಿಕೆ ಯೊಂದಿಗೆ ಕಬಡ್ಡಿ ಆಟದ ದೃಷ್ಟಿಯನ್ನಿಟ್ಟುಕೊಂಡು ರಂಗಮಂದಿರ, ಮೈದಾನ ಅಭಿವೃದ್ಧಿಗೆ ಆದ್ಯತೆ ನೀಡುವಮೂಲಕ ಇಲ್ಲಿನ ರಂಗ ೆ, ಕ್ರೀಡಾ ಚಟುವಟಿಕೆ ಹಿಂದಿನಂತೆನಡೆಯಲಿ ಎಂದು ಸ್ಥಳೀಯರು ಆಸಯ ವ್ಯಕ್ತಪಡಿಸಿದ್ದಾರೆ. ಈ ಮೈದಾನದಲ್ಲಿ ಕಬಡ್ಡಿ ಆಟಕ್ಕೆ 48 ವರುಷಗಳ ಇತಿಹಾಸವಿದ್ದು, ಕಬಡ್ಡಿ ಪ್ರತಿಭೆಗಳನ್ನು ಪ್ರೋತ್ಸಾಹಿ ಸುವ ಕಾರ್ಯ ಈ ಮೈದಾನದಿಂದ ಆಗಬೇಕು ಎಂದು ಫುಟ್‌ಬಾಲ್ ಕ್ರೀಡಾ ತರಬೇತುದಾರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಜಿದ್ ಉಳ್ಳಾಲ ತಿಳಿಸಿದ್ದಾರೆ.
ಮೈದಾನ ಸುತ್ತ ಅವ್ಯವಸ್ಥೆ
ಮೈದಾನ ಮತ್ತು ರಂಗಮಂದಿರದ ಸುತ್ತ ಅವ್ಯವಸ್ಥೆಯಿದ್ದು, ಚರಂಡಿ ಸ್ಲ್ಯಾಬ್ ಕುಸಿದು ಒಳಪೇಟೆಯ ಮುಖ್ಯ ರಸ್ತೆಯಿಂದ ಮೈದಾನಕ್ಕೆ ಬರುವ ಸಾರ್ವಜನಿಕರು ಎಚ್ಚರಿಕೆಯಿಂದ ನಡೆದಾಡುವ ಸ್ಥಿತಿ ಇದೆ. ಈಗಾಗಲೇ ರಸ್ತೆ ವಿಸ್ತರಣೆಗೆ ಮೈದಾನ ಬದಿಯ ಅಂಗಡಿಗಳ ಒತ್ತುವರಿ ತೆರವಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರತೀ ವರ್ಷ ನಡೆಯುವ ಮೊಸರು ಕುಡಿಕೆ ಉತ್ಸವ ಈ ವರ್ಷ ಆಗಸ್ಟ್ ಕೊನೆಯ ವಾರದಲ್ಲಿ ಇದೇ ರಂಗಮಂದಿರದಲ್ಲಿ ನಡೆಯುವುದರಿಂದ ತಾತ್ಕಾಲಿಕ ದುರಸ್ತಿ ಕಾರ್ಯಗಳು ನಡೆಯಬೇಕಾಗಿದೆ. ಇದೇ ರಂಗಮಂದಿರದಲ್ಲಿರುವ ಅಂಗನವಾಡಿಗೂ ಕಟ್ಟಡ ಸುಸಜ್ಜಿತ ಕೇಂದ್ರ ನಿರ್ಮಾಣವಾಗಬೇಕಾಗಿದೆ.
– ವಸಂತ ಎನ್. ಕೊಣಾಜೆ