Advertisement

ಜಾತಿ ಮುಕ್ತ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್‌ ಶ್ರಮ

09:04 PM Dec 07, 2019 | Lakshmi GovindaRaj |

ಆನೇಕಲ್‌: ಜಾತಿ ಮುಕ್ತ ಸಮಾಜ ನಿರ್ಮಾಣ ವಾಗಬೇಕೆಂದು ಅಂಬೇಡ್ಕರ್‌ ಕನಸು ಕಂಡಿದ್ದರು. ಆದರೆ, ಕನಸು ಇಂದಿಗೂ ನನಸಾಗಿಲ್ಲ ಎಂದು ಹೋರಾಟಗಾರ ಬಿ.ಗೋಪಾಲ್‌ ಬೇಸರ ವ್ಯಕ್ತ ಪಡಿಸಿದರು.

Advertisement

ತಾಲೂಕಿನ ಜಿಗಣಿಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಜೈ ಭೀಮ್‌ ಅಂಬೇಡ್ಕರ್‌ ಯುವಕರ ಸಂಘದ ಸಹಯೋಗದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ 63ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಸೇರಿ ಎಲ್ಲಾ ವಯಸ್ಕರಿಗೂ ಮತದಾನ ಹಕ್ಕು ದೊರೆತಿದ್ದು ಅಂಬೇಡ್ಕರ್‌ ಹೋರಾಟದ ಫ‌ಲವೇ ಹೊರೆತು ಗಾಂಧಿ ಮತ್ತು ಭಗವಂತನ ಕೃಪೆಯಿಂದ ಅಲ್ಲ ಎಂದರು.

ಕೆರೆ ನೀರು ಸೇವನೆಗೆ, ಅಸ್ಪೃಶ್ಯತೆ ನಿರ್ಮೂಲನೆ ಸೇರಿದಂತೆ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು ಯಾವುದೇ ಭಗವಂತನಲ್ಲ ಅವರೇ ಅಂಬೇಡ್ಕರ್‌. ಅವರು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡಿಲ್ಲ, ಹಿಂದುಳಿದ ಸಮುದಾಯಕ್ಕೂ ಸಮಾನ ಹಕ್ಕು ಕೊಟ್ಟಿದ್ದಾರೆ ಎಂಬುದನ್ನು ಅರಿಯಬೇಕಿದೆ ಎಂದರು.

ದೇಶದ ಆಡಳಿತವನ್ನು ಶೋಷಿತ ಸಮುದಾಯ ನಡೆಸಬೇಕು ಎಂಬುದು ಅಂಬೇಡ್ಕರ್‌ ಕನಸಾಗಿತ್ತು. ಆದರೆ, ಆ ಕನಸೂ ಇಂದಿಗೂ ನೆರವೇರಲಿಲ್ಲ. ಅಂಬೇಡ್ಕರ್‌ ರಥವನ್ನು ಅಂಬೇಡ್ಕರ್‌ ವಾದಿಗಳು ಮುಂದೆ ಎಳೆದುಕೊಂಡು ಹೋಗುವ ಕೆಲಸವಾಗಬೇಕಿದೆ. ಸಂವಿಧಾನ ಯಥಾಸ್ಥಿತಿಯಾಗಿ ಜಾರಿಗೆಗೊಳಿಸಿದರೆ ಈ ದೇಶದಲ್ಲಿ ಬಡವರು ಇರುವುದಿಲ್ಲ. ಆದರೆ ಇಂದು ಶತ್ರುಗಳ ಕೈಯಲ್ಲಿ ಸಂವಿಧಾನ ಸಿಲುಕಿಕೊಂಡಿದೆ.

ಸಂವಿಧಾನ ಜಾರಿ ಮಾಡುವ ಹಂತಕ್ಕೆ ನಮ್ಮವರು ಬರಬೇಕಿದೆ. ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಅಧಿಕಾರ ಪಡೆಯುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕೆಂದರು. ನಮ್ಮ ದಲಿತ ಸಮುದಾಯಗಳಲ್ಲಿ ಒಗ್ಗಟ್ಟು ಮತ್ತು ಅರಿವಿನ ಕೊರತೆಯಿಂದ ಅಧಿಕಾರ ಪಡೆಯಲು ಸಾಧ್ಯವಾಗುತ್ತಿಲ್ಲ, ಬೇಡುವುದನ್ನು ಬಿಟ್ಟು ಆಳುವ ಸಮಾಜವಾಗಬೇಕಿದೆ ಎಂದು ಯುವಕರಿಗೆ ಸ್ಪೂರ್ತಿ ತುಂಬಿದರು.

Advertisement

ಹೋರಾಟಗಾರ ಜಿಗಣಿ ವಿನೋದ್‌, ಅಂಬೇಡ್ಕರ್‌ ನೀಡಿರುವ ಸಂವಿಧಾನದ ಭಿಕ್ಷೆಯಲ್ಲಿ ನಾವು ಬದುಕುತ್ತಿದ್ದು ನಿರಾಶ್ರಿತರಿಗೆ ನಮ್ಮ ಕೈಲಾದ ಸೇವೆ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡೋಣ. ಪ್ರತಿ ಮನೆ-ಮನದಲ್ಲಿ ಅಂಬೇಡ್ಕರ್‌ ಅವರ ಆಶಯಗಳನ್ನು ಭಿತ್ತಿ ಬುದ್ಧ ಭಾರತ ನಿರ್ಮಾಣ ಮಾಡೋಣ ಎಂದರು. ಹಾಗೆಯೇ ಮತವನ್ನು ಹಣ- ಆಮಿಷಗಳಿಗೆ ಮಾರಾಟ ಮಾಡದೆ ಉತ್ತಮ ವ್ಯಕ್ತಿಗಳಿಗೆ ಮತ ಹಾಕುವ ಮುಖೇನ ನಮ್ಮ ಅಭಿವೃದ್ಧಿಯನ್ನು ನಾವೇ ಕಾಣಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next