Advertisement

ಅಂಬೇಡ್ಕರ್‌ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ

09:07 PM Feb 22, 2020 | Lakshmi GovindaRaj |

ಚಾಮರಾಜನಗರ: ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕಾಮಗಾರಿ ವೈಜ್ಞಾನಿಕವಾಗಿರಲಿ: ಅಧಿಕಾರಿಗಳ ತಂಡದೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವಿ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳ ಸಂಪೂರ್ಣ ವಿವರವನ್ನು ಪಡೆದುಕೊಂಡರು. ವಿಶೇಷ ಅನುದಾನದಡಿ ಕೈಗೊಳ್ಳಲಾಗಿರುವ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿಯವರು, ಪ್ರಮುಖವಾಗಿ ಕ್ರೀಡಾಂಗಣಕ್ಕೆ ನೀರು ನುಗ್ಗದಂತೆ ಒಳಚರಂಡಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಹೊನಲು ದೀಪಗಳನ್ನು ಅಳವಡಿಸಬೇಕು. ಇತರೆ ವಿದ್ಯುತ್‌ ದೀಪಗಳು ಸಹ ಇರುವಂತೆ ವ್ಯವಸ್ಥೆ ಕೈಗೊಳ್ಳಲು ಸೂಚನೆ ನೀಡಿದರು.

ಜನರ ಅನುಕೂಲಕ್ಕೆ ಸೌಲಭ್ಯ ಕಲ್ಪಿಸಿ: ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರಬೇಕು. ವಾಲಿಬಾಲ್‌, ಕಬ್ಬಡಿ, ಖೋ-ಖೋ ಹೊರಾಂಗಣ ಆಟಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಉಳಿದ ಇತರೆ ಆಟೋಟಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಕೆಲಸ ನಿರ್ವಹಣೆ ಮಾಡಬೇಕು. ಕ್ರೀಡಾಂಗಣಕ್ಕೆ ಬೆಳಿಗ್ಗೆ ಬರುವ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಗಣ್ಯರ ಪ್ರವೇಶಕ್ಕೆ ಸೂಕ್ತ ದ್ವಾರ ಅಗತ್ಯ: ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ನೆರಳಿನ ವ್ಯವಸ್ಥೆಯಾಗಬೇಕು. ಕ್ರೀಡಾಂಗಣವು 20 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಆದರೆ, ಪ್ರವೇಶ ದ್ವಾರ ಒಂದೇ ಇದೆ. ಗಣ್ಯ ವ್ಯಕ್ತಿಗಳ ಪ್ರವೇಶಕ್ಕೂ ಯಾವುದೇ ಪ್ರತ್ಯೇಕ ಪ್ರವೇಶ ದ್ವಾರ ನಿರ್ಮಿಸಲಾಗಿಲ್ಲ. ಪ್ರೇಕ್ಷಕರ ಸಾಮರ್ಥ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಮತ್ತೂಂದು ಪ್ರವೇಶ ದ್ವಾರಕ್ಕೆ ಅವಕಾಶ ಕಲ್ಪಿಸಬೇಕು. ಗಣ್ಯರ ಪ್ರವೇಶಕ್ಕೂ ಸೂಕ್ತ ದ್ವಾರಕ್ಕೆ ಅವಕಾಶವಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹಸಿರೀಕರಣಗೊಳಿಸಿ: ಕ್ರೀಡಾಂಗಣದ ಸುತ್ತಲೂ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದಿಂದ ಗಿಡಗಳನ್ನು ಹಾಕುವ ಮೂಲಕ ಹಸಿರೀಕರಣಗೊಳಿಸಬೇಕು. ಕ್ರೀಡಾಂಗಣದ ಸುತ್ತ-ಮುತ್ತಲಿನ ಪರಿಸರ ಉತ್ತಮವಾಗಿರಬೇಕು. ತ್ವರಿತಗತಿಯಲ್ಲಿ ಕ್ರೀಡಾಂಗಣದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಬಳಿಕ ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಡೀಸಿ, ಗುಣಮಟ್ಟದ ಕೆಲಸವಾಗಬೇಕು. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳಸಬೇಕು. ನೆರಳು ಹಾಗೂ ಜೈವಿಕ ಇಂಧನ ನೀಡುವ ಪರಿಸರ ಸ್ನೇಹಿ ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸುರೇಂದ್ರ, ನಗರಸಭೆ ಪೌರಾಯುಕ್ತ ರಾಜಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಎಂ.ಚಲುವಯ್ಯ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next