Advertisement

ಅಂಬೇಡ್ಕರ್‌ ಸಮುದಾಯ ಭವನ ದುರಸ್ತಿಗೆ ವರ್ಷ ಬೇಕಾ? ಶೀಘ್ರ ದುರಸ್ತಿಪಡಿಸಿ ಬಳಕೆಗೆ ಅವಕಾಶ ನೀಡಿ

01:59 PM Feb 24, 2022 | Team Udayavani |

ಗುಂಡ್ಲುಪೇಟೆ: ದುರಸ್ತಿ ನೆಪದಲ್ಲಿ ಪಟ್ಟಣದ ಹೊರ ವಲಯದ ಊಟಿ ಸರ್ಕಲ್‌ಗೆ ಹೊಂದಿಕೊಂಡಿರುವ ಅಂಬೇಡ್ಕರ್‌ ಭವನ ಕಳೆದ ಒಂದು ವರ್ಷದಿಂದಲೂ ಬಾಗಿಲು ಮುಚ್ಚಿದೆ.
ತಾಲೂಕಿನಲ್ಲಿ 60-70 ಸಾವಿರಕ್ಕೂ ಅಧಿಕ ದಲಿತ ಸಮುದಾಯ ಜನ ಸಂಖ್ಯೆಯಿದೆ. ಇದರಲ್ಲಿ ಹೆಚ್ಚಿನ ಮಂದಿ ಭೂ ರಹಿತ ಕುಟುಂಬಗಳಿದ್ದು, ಶೇ.80ರಷ್ಟು ಜನರು ಕೂಲಿ ಅವಲಂಬಿಸಿದ್ದಾರೆ. ಇಂತಹ ಜನರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿರುವ ಅಬೇಡ್ಕರ್‌ ಭವನವನ್ನು 10ರಿಂದ 15 ಸಾವಿರ ರೂ. ಬಾಡಿಗೆಗೆ ನೀಡುತ್ತಿದ್ದ ಹಿನ್ನೆಲೆ ತಾಲೂಕಿನ ಬಹುತೇಕ ಮಂದಿ ಮದುವೆ ಸೇರಿದಂತೆ ಇನ್ನಿತರ ಕಾರ್ಯ ಕ್ರಮಗಳನ್ನು ನಡೆಸುತ್ತಿದ್ದರು.

Advertisement

ಸಮಾಜ ಕಲ್ಯಾಣ ಇಲಾಖೆ ಇದರ ಮೇಲ್ವಿಚಾರಣೆ ಹೊತ್ತಿದೆ.

ಮೂಲಸೌಲಭ್ಯ ಕೊರತೆ: ಕಳೆದ ಮೂರ್‍ನಾಲ್ಕು ವರ್ಷದಿಂದ ವಿದ್ಯುತ್‌ ಸಮಸ್ಯೆ ಇದ್ದು, ಈ ಹಿನ್ನೆಲೆ ಸಭೆ ಸಮಾರಂಭ ಮಾಡುವವರು ಹೊರಗಿನಿಂದ ಜನರೇಟರ್‌ ತರಬೇಕಾಗಿದೆ.
ಭವನದಲ್ಲಿರುವ ಕಿರಿದಾದ ಒಂದೇ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಜೊತೆಗೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಕೂಡ ಇಲ್ಲ. ಹೊರಗಿನಿಂದ ನೀರು ತರಿಸಬೇಕಾದ ಪರಿಸ್ಥಿತಿ ಇದೆ.

ಕಟ್ಟಡ ಪಾಳು: ಭವನದ 10ಕ್ಕೂ ಹೆಚ್ಚು ಕಡೆ  ಕಿಟಕಿ ಗಾಜುಗಳು ಒಡೆದಿವೆ. ಇದರಿಂದ ಅಕ್ಕಿ-ಪಕ್ಷಿಗಳು ಭವನದೊಳಗೆ ನುಗ್ಗಿ ಗೂಡು ಕಟ್ಟಿಕೊಂಡಿವೆ. ಭವನವು ಪಟ್ಟಣದ ಹೊರವಲಯದಲ್ಲಿರುವ ಕಾರಣ ರಾತ್ರಿ ವೇಳೆ ಕುಡುಕರು ಈ ಸ್ಥಳದಲ್ಲಿ ಮದ್ಯದ ಬಾಟಲಿ ಬಿಸಾಡುತ್ತಿದ್ದಾರೆ. ಭವನವು ತಗ್ಗಿನಲ್ಲಿರುವ ಕಾರಣ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಕಟ್ಟಡ ಪಾಳು ಬಿದ್ದಂತೆ ಕಾಣುತ್ತಿದೆ. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಭವನವನ್ನು ದುರಸ್ತಿ ಪಡಿಸಿ, ಸಾರ್ವಜನಿಕರ ಬಳಕೆಗೆ ನೀಡಬೇಕು ಎಂದು ಸಾರ್ವಜನಿಕರು
ಆಗ್ರಹಿಸಿದ್ದಾರೆ.

– ಬಸವರಾಜು ಎಸ್‌.ಹಂಗಳ

Advertisement
Advertisement

Udayavani is now on Telegram. Click here to join our channel and stay updated with the latest news.

Next