Advertisement

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

02:02 AM Dec 25, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಎಂಬುದು ತಿಪ್ಪೆ ಇದ್ದಂತೆ. ಕೆದಕಿದಷ್ಟೂ ದುರ್ವಾಸನೆ ಬರುತ್ತದೆ ಎಂದಿರುವ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರನ್ನು ಮತ ಬ್ಯಾಂಕ್‌ಗಾಗಿ ಬಳಸಿದ ನಕಲಿ ಗಾಂಧಿಗಳ ಕಾಂಗ್ರೆಸ್‌ ಇದು ಎಂದು ಜರಿದಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿವೆ. ನಿಧಾನಿಸಿ ಯೋಚಿಸಿದಾಗ ನಿಜ ತಿಳಿಯುತ್ತದೆ. ಅಮಿತ್‌ ಶಾ ಹೇಳಿಕೆಯಿಂದ ಕಾಂಗ್ರೆಸ್‌ನ ಮುಖವಾಡ ಕಳಚಿದೆ. ಈ ಸತ್ಯಾಂಶ ಎಲ್ಲರೂ ಅರಿಯಬೇಕು ಎಂದರು.

ಅಂಬೇಡ್ಕರರನ್ನು ಎಷ್ಟು ಅಪಹಾಸ್ಯ ಮಾಡಿದ್ದೀರಿ? ನೋವು ಕೊಟ್ಟಿರಿ? ಸಂವಿಧಾನ ರಚಿಸುವಾಗ ಬೇಕಿದ್ದ ಅಂಬೇಡ್ಕರರನ್ನು ದೂರ ಇಟ್ಟು 370ನೇ ವಿಧಿಯನ್ನು ನೀವು ಸೇರಿಸಿದಿರಿ. ಅವರು ಗೆದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿರಿ. ತೀರಿಕೊಂಡಾಗ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆಗೂ ಜಾಗ ಕೊಡಲಿಲ್ಲ. ಇದಕ್ಕೆ ಪಶ್ಚಾತ್ತಾಪಪಡಿ. ಅವರಿಗೆ ಮಾಡಿದ ದ್ರೋಹಕ್ಕೆ ಅಷ್ಟು ಬಾರಿ ದೇವರ ಧ್ಯಾನವನ್ನಾದರೂ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತು. ಇಲ್ಲದಿದ್ದರೆ ನರಕಕ್ಕೆ ಹೋಗುತ್ತೀರಿ ಎನ್ನುವ ಅರ್ಥದಲ್ಲಿ ಅಮಿತ್‌ ಶಾ ಹೇಳಿದ್ದರು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ದೇಶಕ್ಕೆ ಮಾದರಿಯಾಗಿ ಗೌರವಿಸಿದ್ದು ಬಿಜೆಪಿ: 
ಅಂಬೇಡ್ಕರ್‌ ಹುಟ್ಟಿದ ಸ್ಥಳ, ಓದಿದ ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌, ದೆಹಲಿಯಲ್ಲಿ ಪ್ರವಾಸವಿದ್ದ ಜಾಗ, ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ಜಾಗ, ಅಂತ್ಯಕ್ರಿಯೆ ಆದ ಜಾಗಗಳನ್ನು ಅಂತಾರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಿ, ದೇಶಕ್ಕೆ ಮಾದರಿಯಾಗಿ ಗೌರವಿಸಿದ್ದು ಬಿಜೆಪಿ. ಕರ್ನಾಟಕದಲ್ಲಿ ಅಂಬೇಡ್ಕರ್‌ ಪಾದಸ್ಪರ್ಶ ಮಾಡಿದ ಕೋಲಾರದ ಕೆಜಿಎಫ್, ಬೆಂಗಳೂರು, ಹಾಸನ, ಧಾರವಾಡ, ಚಿಕ್ಕೋಡಿ ಮತ್ತು ಬೆಳಗಾವಿ, ವಿಜಯಪುರ ಹಾಗೂ ಕಲಬುರಗಿಯ ವಾಡಿಯನ್ನು ಪುಣ್ಯಕ್ಷೇತ್ರ ಮಾಡಲು ಬೊಮ್ಮಾಯಿ 10 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೂ ಈ ಸರ್ಕಾರ ಏನೂ ಮಾಡಿಲ್ಲ. ಏಕೆ? ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್‌ ಖರ್ಗೆ ಮಾತ್ರ ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ್ದರು. ಹೊರಗೆ ದೇವರ ಹೆಸರು ಹೇಳಿದರೆ ಏನೂ ಸಿಗಲ್ಲ, ಅಂಬೇಡ್ಕರ್‌ ಹೆಸರು ಬಳಸಿದರೆ ಎಲ್ಲವೂ ಸಿಗುತ್ತದೆ ಎಂಬುದು ಅವರಿಗೂ ಗೊತ್ತಿದೆ. ಇದೇ ಕಾರಣಕ್ಕೆ ಅಂಬೇಡ್ಕರ್‌ ಹೆಸರನ್ನು ಇವರೆಲ್ಲಾ ಫ್ಯಾಶನ್‌ ಮಾಡಿಕೊಂಡಿದ್ದಾರೆ ಎಂದು ದೂರಿದರು.

Advertisement

ಅಮಿತ್‌ ಶಾ ಅವರ ಮಾತಿನಿಂದ ಅವಮಾನ ಆಗಿದ್ದರೆ ಅದು ಕಾಂಗ್ರೆಸಿಗರಿಗೆ ಮಾತ್ರ. ಅವರ ಮುಖವಾಡ ಕಳಚಿದ್ದನ್ನು ಸಹಿಸಲಾರದ ಸ್ಥಿತಿಗೆ ಹೋಗಿದ್ದಾರೆ. ಇದರಲ್ಲಿ ಸಂಘಟನೆಗಳು ಕುಪಿತರಾಗುವ ಆವಶ್ಯಕತೆ ಏನಿದೆ? ಇದೆಲ್ಲವೂ ಕಾಂಗ್ರೆಸಿಗರ ಹೊಲಸುತನ ತೋರುತ್ತಿದೆ. ನಿಮಗೆ ಪಾಪಪ್ರಜ್ಞೆ ಇದ್ದರೆ ದೇಶದ ಕ್ಷಮೆ ಕೇಳಿ. ಅಂಬೇಡ್ಕರ್‌ ಅವರಿಗೆ ಮಾಡಿದ ಅನ್ಯಾಯಕ್ಕೆ ದೇವರ ಹೆಸರು ಹೇಳಿಯಾದರೂ ಪುಣ್ಯ ಕಟ್ಟಿಕೊಳ್ಳಿ. ಅಮಿತ್‌ ಶಾ ಮಾತು ಪಾಲಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next