ವಾಡಿ: ದಲಿತ ಸಂಘಟನೆಗಳ ಒಗ್ಗಟ್ಟು ಪ್ರದರ್ಶನದ ಜತೆಗೆ ಅಂಬೇಡ್ಕರ್ ಚಿಂತನೆಗಳನ್ನು ಸರ್ವ ಸಮುದಾಯಗಳ ಮಧ್ಯೆ ಕೊಂಡೊಯ್ಯಲು ಮಾ.18 ರಂದು ಚಿತ್ತಾಪುರದಲ್ಲಿ ಅರ್ಥಪೂರ್ಣವಾಗಿ ಅಂಬೇಡ್ಕರ್‌ರ 125ನೇ ಜಯಂತಿ ಆಚರಿಸಲಾಗುತ್ತಿದೆ ಎಂದು ಮಾಜಿ ಜಿಪಂ ಸದಸ್ಯ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಾಪಣ್ಣ ಗಂಜಿಗೇರಿ ಹೇಳಿದರು.
ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಜಯಂತ್ಯುತ್ಸವದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ವಿವಿಧ ಸಮಾಜಗಳ ಮುಖಂಡರನ್ನು ಜತೆಗೂಡಿಸಿಕೊಂಡು ಅಂಬೇಡ್ಕರ್ ರಥವನ್ನು ಎಳೆಯಲಾಗುತ್ತಿದೆ.
ಅಂದು ನಡೆಯಲಿರುವ ಬೃಹತ್ ಮೆರವಣಿಗೆಯಲ್ಲಿ ಅಂಬೇಡ್ಕರ್ ಜೀವನದ ಘಟನೆಗಳನ್ನು ನೆನಪಿಸುವ ಸ್ತಬ್ದ ಚಿತ್ರಗಳ ಪ್ರದರ್ಶನ ಏರ್ಪಡಿಸಲು ಚಿಂತಿಸಲಾಗುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸಭೆ ಉದ್ಘಾಟಿಸಲಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆ ವಹಿಸುವರು. ಸಾಹಿತಿ ದೇವನೂರು ಮಹಾದೇವ ದಲಿತರ ಸ್ಥಿತಿಗತಿಗಳ ಕುರಿತು ಮಾತನಾಡುವರು.
ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಇನ್ನಿತರರು ಆಗಮಿಸಲಿದ್ದಾರೆ. ತಾಲೂಕಿನ ಸುಮಾರು 25000ಕ್ಕೂ ಹೆಚ್ಚು ಜನ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಜಿಪಂ ಸದಸ್ಯ ಶಿವರುದ್ರ ಬೀಣಿ ಮಾತನಾಡಿ, ಶಾಂತಿ ಹಾಗೂ ಶಿಸ್ತು ಕಾಪಾಡುವ ಮೂಲಕ ಅಂಬೇಡ್ಕರ್ ಜಯಂತಿಗೆ ಶೋಭೆ ತರಬೇಕು ಎಂದರು. ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಮುಖಂಡರಾದ ದೇವಿಂದ್ರ ನಿಂಬರ್ಗಾ, ಮಲ್ಲಿಕಾರ್ಜುನ ತುನ್ನೂರ, ಅಪ್ಪಾರಾವ ಸರಡಗಿ, ಭೀಮಾ ನಾಟೇಕರ, ಸೂರ್ಯಕಾಂತ ರದ್ದೇವಾಡಿ, ಶರಣಬಸು ಸಿರೂರಕರ, ಶರಣು ನಾಟೀಕಾರ,
ರಾಹುಲ ಮೇನಗಾರ, ಖೇಮಲಿಂಗ ಬೆಳಮಗಿ, ರವಿಕುಮಾರ ಕೋಳಕೂರ, ವಿಜಯ ಸಿಂಗೆ, ಗೌತಮ ಬೆಡೆಕರ, ಭೀಮಾಶಂಕರ ಸಿಂಧೆ, ದೇವಿಂದ್ರ ಕರದಳ್ಳಿ, ಚಂದಪ್ಪ ಕಟ್ಟಿಮನಿ, ರಿಚ್ಚರ್ಡ್ ಮರೆಡ್ಡಿ, ಪರಶುರಾಮ ಕಟ್ಟಿಮನಿ, ರಾಹುಲ ಹೀರಾಪುರ ಪಾಲ್ಗೊಂಡಿದ್ದರು. ಇದೆ ವೇಳೆ ಜಯಂತಿಯ ವಾಡಿ ವಲಯದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಚಂದ್ರಸೇನ ಮೇನಗಾರ ಅವರನ್ನು ಆಯ್ಕೆ ಮಾಡಲಾಯಿತು.