ಬಾಗಲಕೋಟೆ: ಜಿಲ್ಲೆಯಲ್ಲಿ ಏ.5ರಂದು ಆಚರಿಸಲ್ಪಡುವ ಡಾ| ಬಾಬು ಜಗಜೀವನರಾಂ ಅವರ 115ನೇ ಜಯಂತಿ ಹಾಗೂ ಏ.14ರಂದು ಆಚರಿಸಲ್ಪಡುವ ಡಾ|ಬಿ.ಆರ್. ಅಂಬೇಡ್ಕರ್ 131ನೇ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಡಾ|ಬಾಬು ಜಗಜೀವನರಾಂ ಹಾಗೂ ಡಾ|ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಗಜೀವನರಾಂ ಜಯಂತಿಯನ್ನು ನವನಗರದಲ್ಲಿರುವ ಜಗಜೀವನರಾಂ ಭವನದಲ್ಲಿ ಹಾಗೂ ಅಂಬೇಡ್ಕರ ಜಯಂತಿ ನವನಗರದ ಅಂಬೇಡ್ಕರ್ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು.
ಆಯಾ ಜಯಂತಿ ದಿನ ಬೆಳಗ್ಗೆ ಭಾವಚಿತ್ರಗಳ ಮೆರವಣಿಗೆ ನಡೆಸಲಾಗುತ್ತಿದೆ. ಮೆರವಣಿಗೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಅಧಿ ಕಾರಿಗಳಿಗೆ ಸೂಚಿಸಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳನ್ನು ಆಹ್ವಾನಿಸಲು ತಿಳಿಸಲಾಯಿತು. ಜಗಜೀವನರಾಂ ಮತ್ತು ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಲು ಉತ್ತಮ ಉಪನ್ಯಾಸಕರನ್ನು ಆಹ್ವಾನಿಸಲು ತಿಳಿಸಿದರು.
ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ, ವೇದಿಕೆ ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ವಿವಿಧ ಇಲಾಖೆಯ ಅ ಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಿರಲು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕು ಕಚೇರಿ, ಶಾಲಾ-ಕಾಲೇಜು, ಗ್ರಾಮ ಪಂಚಾಯತಿ ಹಾಗೂ ಇತರೆ ಕಚೇರಿಗಳಲ್ಲಿ ಡಾ| ಬಾಬು ಜಗಜೀವನರಾಂ ಹಾಗೂ ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ ಕಡ್ಡಾಯವಾಗಿ ಆಚರಿಸಲು ನಿರ್ದೇಶನ ನೀಡುವಂತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲು ತಿಳಿಸಿದರು.
ಜಿಪಂ ಸಿಇಒ ಟಿ.ಭೂಬಾಲನ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರಾದ ಅಶೋಕ ನಾರಾಯಣ, ಹನಮಂತ ಚಿಮ್ಮಲಗಿ, ಎಸ್.ಡಿ. ಚಿಕ್ಕಲಕಿ, ಎ.ಎಸ್.ಚಂದಾವನಿ, ವೈ.ಜಿ. ತಿಮ್ಮಾಪುರ, ಚಂದ್ರಶೇಖರ ಹಾದಿಮನಿ, ವೈ.ಸಿ. ಕಾಂಬಳೆ, ಯಲ್ಲಪ್ಪ ಸನಕ್ಯಾನವರ, ನಿಂಗರಾಜ ಮಬ್ರೂಮಕರ, ಗುರುಶಾಂತಪ್ಪ ಮದಿನಕರ ಉಪಸ್ಥಿತರಿದ್ದರು.