ಬೆಂಗಳೂರು: ಭಾರತ ಪ್ರಜಾಪ್ರಭುತ್ವದ ದೇಗುಲವಾಗಲು ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್‌ರ ಕೊಡುಗೆ ಅಪಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಣ್ಣಿಸಿದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಜೆಗಳೇ ಆಡಳಿತ ನಡೆಸುವ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದಾಗಿದೆ. ಪ್ರಜಾಪ್ರಭುತ್ವವೆಂದರೆ ಸ್ವೇಚ್ಛಾಚಾರವಲ್ಲ, ದೇಶದ ಕಾನೂನಿನಂತೆ ಎಲ್ಲರೂ ನಡೆದುಕೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಸಂವಿಧಾನ ಜಾರಿಗೆ ತರಲಾಯಿತು ಎಂದರು.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆನಿಸಿದೆ. ಸ್ವಾತಂತ್ರ್ಯ ನಂತರದ ಕನಸುಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಈಡೇರಿಸುತ್ತಿದೆ. ಭಾರತವನ್ನು ಅಮೆರಿಕ, ಸಿಂಗಾಪುರ ಮಾಡುತ್ತೇವೆಂದು ಚುನಾವಣೆ ವೇಳೆ ಅನೇಕರು ಹೇಳಿದ್ದುಂಟು. ಆದರೆ, ಈಗ ಅಮೆರಿಕ, ಭಾರತ ವಾಗಬೇಕೆಂದು ಸ್ವತಃ ಅಲ್ಲಿನ ಅಧ್ಯಕ್ಷರೇ ಹೇಳಿದ್ದಾರೆ. ಆ ರೀತಿ ಬದಲಾವಣೆ ದೇಶ ದಲ್ಲಿ ಆಗಿವೆ ಎಂದು ಹೇಳಿದರು.
ಅಭಿವೃದ್ಧಿ ಪರ ಆಡಳಿತ: ರಾಜ್ಯದ ಕಟ್ಟಕಡೆ ವ್ಯಕ್ತಿಯ ಕಲ್ಯಾಣಕ್ಕೆ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂಪ್ಪ ನೇತೃತ್ವದ ಸರ್ಕಾರ ಸರ್ವರೂ ಸಮಾನ-ಸರ್ವರಿಗೂ ಸಮಬಾಳು ಎನ್ನುವ ಮಂತ್ರದೊಂದಿಗೆ ಕೆಲಸ ಮಾಡುತ್ತಿದೆ ಎಂದರು. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹುತಾತ್ಮರು ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು.
370ನೇ ವಿಧಿ ರದ್ದು, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಮೂಲಕ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ, ಗಾಂಧೀಜಿ ಅವರ ಕನಸನ್ನು ನನಸಾಗಿಸಿದೆ ಎಂದರು. ದೇಶದ ಏಕತೆ, ಅಖಂಡತೆ, ಸಮಗ್ರತೆ ಎತ್ತಿಹಿಡಿಯಲು ಶ್ರಮಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿವೆ ಎಂದು ಭರವಸೆ ನೀಡಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯಾ ಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಮತ್ತು ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಇದ್ದರು.
ಎಚ್‌ಡಿಕೆಗೆ ಶೋಭೆ ತರಲ್ಲ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪ್ರಚಾರಕ್ಕೋಸ್ಕರ ಮನಬಂದಂತೆ ಮಾತನಾಡುತ್ತಿದ್ದಾರೆ. ಮಂಗಳೂರು ಗಲಭೆ ಸಂದರ್ಭದಲ್ಲೂ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡಿದ್ದಾರೆ. ಈಗ ಪ್ರಚಾರಕ್ಕಾಗಿ ಕೊಲೆ ಬೆದರಿಕೆ ಇದೆ ಎಂದು ಹೇಳುತ್ತಿದ್ದಾರೆ.
ಇಂತಹ ಕೆಳಮಟ್ಟದ ಮಾತುಗಳನ್ನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಟೀಲ್ ಕಿಡಿಕಾರಿದರು. ಸಚಿವ ಸಂಪುಟ ವಿಸ್ತರಣೆ ತೀರ್ಮಾನವನ್ನು ಮುಖ್ಯಮಂತ್ರಿ ತೆಗೆದುಕೊಳ್ಳಲಿದ್ದಾರೆ. ಆದರೆ, ಈ ವಿಚಾರವಾಗಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಹೊರಟಿದೆ. ಕಳೆದ 3 ತಿಂಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಾವಿಕನೇ ಇಲ್ಲ. 3 ತಿಂಗಳಾದರೂ ಅಧ್ಯಕ್ಷರನ್ನು ಆಯ್ಕೆ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಗುಡುಗಿದರು.