ಎಚ್.ಡಿ.ಕೋಟೆ: ತುಂಬಾ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿ ಹಲವಾರು ಪದವಿ ಪಡೆಯುವುದರ ಜೊತೆಗೆ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ಕೊಟ್ಟ ದೇಶ ಕಂಡ ಅಪ್ರತಿಮ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯಲ್ಲಿ ಮಾತನಾಡಿದರು.
ಆದಿ ಕರ್ನಾಟಕ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಮುದ್ದುಮಲ್ಲಯ್ಯ ಮಾತನಾಡಿ, ಭಾರತ ದೇಶದ ಸಾಮಾಜಿಕ ಅವ್ಯವಸ್ಥೆ ಕೂಪದಲ್ಲಿ ಹುಟ್ಟಿದ ಮಹಾನ್ ಯೋಗಿ ಡಾ.ಬಿ.ಆರ್.ಅಂಬೇಡ್ಕರ್, ದೇಶದಲ್ಲಿ ಹೆಚ್ಚಿದ್ದ ಜಾತಿ ವ್ಯವಸ್ಥೆ ಹಾಗೂ
ಸಾಮಾಜಿಕ ಅಸಮಾನತೆಯಿಂದಾಗಿ ಬಾಬಾ ಸಾಹೇಬರು ತಮ್ಮ ಬಾಲ್ಯದಲ್ಲಿಯೇ ಅನೇಕ ಅವಮಾನ, ಅಪಮಾನಗಳಿಗೆ ಒಳಗಾಗಿದ್ದರು. ತಾವೂ ಎಲ್ಲ ನೋವುಗಳನ್ನು ಅನುಭವಿಸಿದ ಪ್ರತಿ ರೂಪವಾಗಿ ಭಾರತ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ಬರೆದುಕೊಟ್ಟರು ಎಂದು ತಿಳಿಸಿದರು.
ಸಂವಿಧಾನ ಬರೆಯುವಾಗಲೂ ಹಲವಾರು ಟೀಕೆ ಮಾಡಿದ್ದಲ್ಲದೆ, ಓರ್ವ ಅಸ್ಪೃಶ್ಯ ಸಂವಿಧಾನ ಬರೆಯುತ್ತಾನೆ ಎಂದು ಅಂದಿನ ಕೆಲವು ರಾಜಕಾರಣಿಗಳು ಅಡ್ಡಿಪಡಿಸಿದರೂ, ದೇಶದ ಕೆಲವು ಮಹನೀಯರ ಸಹಕಾರದಲ್ಲಿ 2 ವರ್ಷ 11 ತಿಂಗಳು 18 ದಿನ ಪ್ರಪಂಚದ ಅನೇಕ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅವಿರತವಾಗಿ ಶ್ರಮಿಸುವ ಮೂಲಕ ಪ್ರಪಂಚವೇ ಮೆಚ್ಚುವ ಶ್ರೇಷ್ಠ ಸಂವಿಧಾನ ಬರೆದು ಅರ್ಪಿಸಿದರು ಎಂದರು.
ಆದಿ ಕರ್ನಾಟಕ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮುದ್ದುಮಲ್ಲಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಏನಾದರೂ ದೇಶಕ್ಕೆ ಸಂವಿಧಾನ ಬರೆಯದಿದ್ದರೇ, ದೇಶ ಇಂದು ಇಷ್ಟು ಅಭಿವೃದ್ಧಿ ಹೊಂದಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಸಂಸ ತಾಲೂಕು ಸಂಚಾಲಕ ಚಾ.ಶಿವಕುಮಾರ್, ಆನಗಟ್ಟಿ ದೇವರಾಜ್, ಜೀವಿಕ ಬಸವರಾಜು, ಕೆ.ಎಂ.ಹಳ್ಳಿ ಸಣ್ಣಕುಮಾರ್, ಸೋಮಣ್ಣ, ಚೌಡಳ್ಳಿ ಜವರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್, ಲೋಕೋಪಯೋಗಿ ಇಲಾಖೆ ಎಇಇ ಶಿವಣ್ಣ, ಉಪತಹಶೀಲ್ದಾರ್ ಆನಂದ್, ಸುನೀಲ್, ಸಮಾಜ ಕಲ್ಯಾಣಾಧಿಕಾರಿ ನಿಜಗುಣಮೂರ್ತಿ, ಶಿವರಾಜು, ಗೋವಿಂದರಾಜು, ಲತಾ ಇದ್ದರು.