Advertisement
ಸುಮಾರು 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಬಿಜೆಪಿ ಸರಕಾರ ಕೈಗೆತ್ತಿಕೊಂಡಿದ್ದು, ವಿಧಾನಸೌಧ ಮತ್ತು ವಿಕಾಸ ಸೌಧದ ಹಿಂದಿನ ಭಾಗದ ವಿಕಾಸಸೌಧದಿಂದ ಹೊರಗಡೆ ಹೋಗುವ ಗೇಟ್ ನಂಬರ್ 2ರ ಬಳಿ ಸರ್ವೆ ನಂಬರ್ 569ರಲ್ಲಿ ಖಾಲಿ ಇರುವ 25.89 ಗುಂಟೆ ಜಾಗದಲ್ಲಿ ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಕಟ್ಟಡ ನೀಲನಕ್ಷೆ ಸಿದ್ಧಪಡಿಸಿದ್ದು, ಒಂದು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಶಕ್ತಿ ಸೌಧದ ಆವರಣದಲ್ಲಿಯೇ ನಿರ್ಮಾಣವಾಗುವ ಡಾ| ಬಿ.ಆರ್. ಅಂಬೇಡ್ಕರ್ ಸ್ಫೂರ್ತಿ ಭವನದಲ್ಲಿ ಪ್ರಮುಖವಾಗಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳು ಹಾಗೂ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ನಿಗಮ ಮಂಡಳಿಗಳ ಕಚೇರಿಗಳು ಎಲ್ಲವೂ ಒಂದೇ ಸೂರಿನಡಿ ಬರಬೇಕೆನ್ನುವ ಕಾರಣಕ್ಕೆ ಈ ಭವನ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಜೀವನ ಹೋರಾಟ, ಸಾಧನೆಯನ್ನು ಬಿಂಬಿಸುವ ಚಿತ್ರಣವನ್ನು ಈ ಭವನದಲ್ಲಿ ಅಳವಡಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆ ಚಿಂತನೆ ನಡೆಸುತ್ತಿದೆ. ವಿಧಾನಸೌಧಕ್ಕೆ ಬಂದವರು ಅಂಬೇಡ್ಕರ್ ಸ್ಪೂರ್ತಿ ಭವನಕ್ಕೆ ಭೇಟಿ ಕೊಟ್ಟು, ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು ತಿಳಿದುಕೊಳ್ಳುವಂತೆ ಮಾಡಲು ಯೋಜಿಸಲಾಗಿದೆ. ಅಲ್ಲದೇ ಅಂಬೇಡ್ಕರ್ ಅವರ ಕುರಿತು ಪುಸ್ತಕಗಳು ಲಭ್ಯವಾಗುವಂತೆ ಮಾಡಲು ಸಮಾಜ ಕಲ್ಯಾಣ ಇಲಾಖೆ ಯೋಜನೆ ರೂಪಿಸುತ್ತಿದೆ. ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ; 50 ಕೋ.ರೂ. ವೆಚ್ಚ
ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ನೀಡಲಾಗಿದ್ದು, ಒಂದು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಈ ಮೊದಲು ಈ ಯೋಜನೆಗೆ 25 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ 25 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ಭವ್ಯ ಭವನ ನಿರ್ಮಾಣವಾಗಲಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶೇಷ ಆಸಕ್ತಿ ವಹಿಸಿ ಈ ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
Related Articles
2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಲಿತ ಸಂಘಟನೆಗಳು ಬೇಡಿಕೆ ಇಟ್ಟ ಪರಿಣಾಮ ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಿ ಅವರು ಬಜೆಟ್‌ನಲ್ಲಿ 25 ಕೋಟಿ ರೂ. ಮೀಸಲಿಟ್ಟಿದ್ದರು. ಆದರೆ, ಆ ಸಂದರ್ಭ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ವಿಧಾನಸೌಧ ಪಾರಂಪರಿಕ ಕಟ್ಟಡವಾಗಿರುವುದರಿಂದ ಅದರ ಸುತ್ತ ಹೊಸ ಕಟ್ಟಡಗಳ ನಿರ್ಮಾಣ ಮಾಡುವುದರಿಂದ ವಿಧಾನಸೌಧ ಮತ್ತು ವಿಕಾಸ ಸೌಧದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಸ್ಥಳ ನೀಡಲು ನಿರಾಕರಿಸಿತ್ತು.
Advertisement
ವಿಧಾನಸೌಧದ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇತ್ತು. ಅದನ್ನು ನಮ್ಮ ಸರಕಾರ ಸಾಕಾರಗೊಳಿಸುವ ಕೆಲಸ ಮಾಡುತ್ತಿದೆ. ಒಂದು ವರ್ಷದಲ್ಲಿ ಭವನ ನಿರ್ಮಾಣ ಪೂರ್ಣಗೊಳಿಸಲು ಸೂಚಿಸಲಾಗಿದೆ.– ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಸಚಿವ ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣ ದಲಿತ ಸಂಘಟನೆಗಳ ಚಳುವಳಿಯ ಫಲವಾಗಿದ್ದು, ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಯನ್ನು ರಾಜ್ಯ ಸರಕಾರ ಕೈಗೆತ್ತಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಈ ಭವನ ನಿರ್ಮಾಣದಿಂದ ಅಂಬೇಡ್ಕರ್ ಅವರಿಗೆ ದೊಡ್ಡ ಗೌರವ ಸಲ್ಲಿಸಿದಂತಾಗುತ್ತದೆ.
– ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕ, ದಸಂಸ (ಅಂಬೇಡ್ಕರ್ ವಾದ)