ಕಲಬುರಗಿ: ಬುಧವಾರ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ವಿನೋಧ ಧಬಕಿ ಎನ್ನುವ ಯುವಕ ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ ಅಂಬೇಡ್ಕರ್ ಛಾಯಾಚಿತ್ರ ವಿರೂಪಗೊಳಿಸಿ ರುಂಡವನ್ನು ಬೇರ್ಪಡಿಸಿ ತಲೆಗೆ ಚೂರಿಯಿಂದ ಚುಚ್ಚಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣ ಸೇರಿದಂತೆ ತಾಲೂಕಿನ ಹೋಬಳಿಗಳಲ್ಲಿ ಬಂದ್ ಹಾಗೂ ಪ್ರತಿಭಟನೆ ಮಾಡುವ ಮೂಲಕ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ 8ಗಂಟೆಗೆ ದಿಢೀರನೆ ರಸ್ತೆಗಿಳಿದ ದಲಿತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಪಟ್ಟಣದ ವಿಜಯಪುರ ಕ್ರಾಸ್, ಅಂಬೇಡ್ಕರ್ ವೃತ್ತ, ಅಖಂಡೇಶ್ವರ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು ವಿನೋದ ಧಬಕಿ ಎಂಬ ಯುವಕನನ್ನು ಗಡಿಪಾರು ಮಾಡಬೇಕು, ಆತನ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು, ಶ್ರೀರಾಮ ಸೇನೆ ನಿರ್ಭಂದಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಹೋಬಳಿಗಳು ಬಂದ್: ಜೇವರ್ಗಿ ತಾಲೂಕಿನಲ್ಲಿರುವ ಯಡ್ರಾಮಿ, ನೆಲೋಗಿ, ಸೊನ್ನ ಕ್ರಾಸ್, ಜೇರಟಗಿ, ಕಟ್ಟಿಸಂಗಾವಿ, ಚಿಗರಹಳ್ಳಿ ಕ್ರಾಸ್, ಆಂದೋಲಾ, ಇಜೇರಿಗಳಲ್ಲೂ ನೂರಾರು ಕಾರ್ಯಕರ್ತರು ಜಮಾಯಿಸಿ ಯುವಕನನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಂದ್ ಆಚರಿಸಿದರು. ತಾಲೂಕಿನಲ್ಲಿ ಶ್ರೀರಾಮ ಸೇನಾ ಸಂಘಟನೆಗಳ ಪದಾಧಿಕಾರಿಗಳು ಪದೇ ಪದೇ ಅಹಿತಕರ ಘಟನೆಗೆ ಕಾರಣಾಗುತ್ತಿದ್ದಾರೆ. ಅಲ್ಲದೆ ವಿನೋದ ಧಬಕಿ ಶ್ರೀರಾಮ ಸೇನೆ ಕಾರ್ಯಕರ್ತನಾಗಿದ್ದಾನೆ. ಹೀಗಾಗಿ ಶ್ರೀರಾಮ ಸೇನೆ ಸಂಘಟನೆ ನಿರ್ಭಂದಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳು-ಕಾರ್ಯಕರ್ತರಲ್ಲದೇ ವಿವಿಧ ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗಿಯಾಗುವ ಮೂಲಕ ಹಾಗೂ ಪಟ್ಟಣದ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲಿಸಿದರು.
ಬಂದ್ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡರಾದ ವಿಠuಲ ದೊಡ್ಮನಿ, ಅರ್ಜುನ ಭದ್ರೆ, ಗುರುಶಾಂತ ಪಟ್ಟೇದಾರ, ಜಿಪಂ ಸಾಮಾಜಿಕ ನ್ಯಾಯ ಸಮೀತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ, ಮಲ್ಲೇಶಿ ಸಜ್ಜನ, ಮಲ್ಲಣ್ಣ ಕೊಡಚಿ, ಭೀಮರಾಯ ನಗನೂರ, ಮರೇಪ್ಪ ಬಡಿಗೇರ, ಪುಂಡಲೀಕ ಗಾಯಕವಾಡ, ಸಿದ್ರಾಮ ಕಟ್ಟಿ, ಶ್ರೀಮಂತ ಧನಕರ, ರಾಜಶೇಕರ ಶಿಲ್ಪಿ, ದೌಲಪ್ಪ ಮದನ, ಭಾಗಣ್ಣ ಸಿದ್ನಾಳ, ಭೂತಾಳಿ ಹೆಗಡೆ, ಶರಣಬಸ್ಸು ಕಲ್ಲಾ, ಅಜ್ಜು ಲಕಪತಿ, ಇಬ್ರಾಹಿಂ ಪಟೇಲ ಮುಂತಾದವರು ಪಾಲ್ಗೊಂಡಿದ್ದರು.