ವಾಡಿ: ಸುಮಾರು 12 ಕೋಟಿ ರೂ.ಗೂ ಹೆಚ್ಚು ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗಿದೆ. ಸಂಬಂಧಿಸಿದವರ ನಿರ್ಲಕ್ಷ್ಯಕ್ಕೆ ಗುರಿಯಾಗಿ ಕಟ್ಟಡ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಸಂವಿಧಾನ ಶಿಲ್ಪಿ ಹೆಸರಿನ ಜಾಗ ಈಗ ಸಾರ್ವಜನಿಕ ಶೌಚಾಲ ಯವಾಗಿ ಮಾರ್ಪಟ್ಟಿದ್ದು ಬೇಸರದ ಸಂಗತಿ.
ಕಾಂಗ್ರೆಸ್ ಹಿರಿಯ ಮುಖಂಡ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಪಟ್ಟಣದ ಇಂದಿರಾ ಕಾಲೋನಿ ಖಾಲಿ ಜಾಗದಲ್ಲಿ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇದಕ್ಕೆ ಸರಕಾರದ ಅನುದಾನ ಒದಗಿಸಿ ಭವನದ ಸುಂದರ ನೀಲನಕ್ಷೆ ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ವೇಗದ ಗತಿ ಪಡೆದುಕೊಂಡಿದ್ದ ಕಾಮಗಾರಿ, ನಂತರದ ದಿನಗಳಲ್ಲಿ ಕುಂಟುತ್ತ ಸಾಗಿ ದಲಿತರ ಆಕ್ರೋಶಕ್ಕೆ ಗುರಿಯಾಯಿತು. ಸದ್ಯ ನೆಲ ಮಾಳಿಗೆ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಮೊದಲನೇ ಮಹಡಿ ಕಾರ್ಯ ಆರಂಭಕ್ಕೂ ಮೊದಲೇ ಕಾರ್ಮಿಕರು ಇಲ್ಲಿಂದ ಕಾಲ್ಕಿತ್ತಿದ್ದು, ಮೂರು ವರ್ಷದಿಂದ ಕಟ್ಟಡ ಸ್ಮಾರಕದಂತೆ ಅನಾಥವಾಗಿ ನಿಂತಿದೆ.
ಅಂಬೇಡ್ಕರ್ ಭವನ ಅಭಿವೃದ್ಧಿ ಕಾಮಗಾರಿ ದೀರ್ಘಕಾಲ ಸ್ಥಗಿತಗೊಂಡ ಪರಿಣಾಮ ಮಳೆ ನೀರು ಮತ್ತು ಚರಂಡಿ ನೀರು ಕಟ್ಟದೊಳಗೆ ನುಗ್ಗಿ ಪಾಚಿಗಟ್ಟಿದೆ. ಸಾರ್ವಜನಿಕರು ರಾತ್ರಿ ವೇಳೆ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಕಾಮಗಾರಿ ಜಾಗ ಗಬ್ಬೆದ್ದು ನಾರುತ್ತಿದೆ. ಹಂದಿಗಳು ವಾಸಸ್ಥಾನವನ್ನಾಗಿ ಮಾಡಿಕೊಂಡು ಪರಿಸರ ಕಲುಷಿತಗೊಳಿಸಿವೆ. ಕಟ್ಟಡ ಪೂರ್ಣಗೊಂಡು ಸಾಮಾಜಿಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿ ಮಾನಸಿಕ ಆರೋಗ್ಯಕ್ಕೆ ಕಾರಣವಾಗಬೇಕಿದ್ದ ಅಂಬೇಡ್ಕರ್ ಭವನದ ಕಾಮಗಾರಿ ನನೆಗುದಿಗೆ ಬೀಳುವ ಮೂಲಕ ಅನಾರೋಗ್ಯದ ಗೂಡಾಗಿ ಪರಿವರ್ತನೆಯಾಗಿದೆ. ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಾಕಿ ಅನುದಾನ ಬಿಡುಗಡೆ ಮಾಡುವ ಮೂಲಕ ಭವನದ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ದಲಿತರ ಆಗ್ರಹವಾಗಿದೆ.
ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತಗೊಳ್ಳಲು ಅನುದಾನ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಐದಾರು ವರ್ಷಗಳಿಂದ ಚಾಲನೆಯಲ್ಲಿರುವ ಕಾಮಗಾರಿ ಏಕಾಏಕಿ ಸ್ಥಗಿತಗೊಂಡಿದೆ. ಎರಡು ವರ್ಷಗಳಿಂದ ಅಧಿಕಾರಿಗಳು ಇತ್ತ ಸುಳಿದಿಲ್ಲ. ಅಂಬೇಡ್ಕರ್ ಹೆಸರಿನಲ್ಲಿರುವ ಕಟ್ಟಡದ ಜಾಗ ಜನರ ಶೌಚಕ್ಕೆ ಬಳಕೆಯಾಗುತ್ತಿದೆ. ಪ್ರಜ್ಞಾವಂತ ದಲಿತರು ತಲೆತಗ್ಗಿಸುವಂತಾಗಿದೆ. ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ಹೋರಾಟಕ್ಕೆ ಕರೆ ನೀಡಲಾಗುವುದು.
•ರವಿ ಬಡಿಗೇರ,ಕರಾದಸಂಸ ಸಂಚಾಲಕ
•ಮಡಿವಾಳಪ್ಪ ಹೇರೂರ