Advertisement

ಅಂಬೇಡ್ಕರ್‌ ಭವನ ಕಾಮಗಾರಿ ಕಳಪೆ: ಜಿಪಂ ಅಧ್ಯಕ್ಷೆ ಆಕ್ರೋಶ

11:58 AM Sep 08, 2019 | Team Udayavani |

ಅರಕಲಗೂಡು: ಪಟ್ಟಣದಲ್ಲಿ ನಡೆಯುತ್ತಿರುವ ಅಂಬೇಡ್ಕರ್‌ ಭವನ ಕಾಮಗಾರಿ ಸಂಪೂರ್ಣ ಕಳಪೆ ಯಾಗಿದ್ದು, ಕೆಲಸದ ಗುತ್ತಿಗೆ ಪಡೆದಿರುವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ವನ್ನು ಕಪ್ಪು ಪಟ್ಟಿಗೆ ಸೇರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ತಿಳಿಸಿದರು.

Advertisement

ಶನಿವಾರ ಅಂಬೇಡ್ಕರ್‌ ಭವನ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಪಂ ಸದಸ್ಯ ಬರಗೂರು ರವಿ ಕಳೆದ ಸಾಮಾನ್ಯ ಸಭೆಯಲ್ಲಿ ಭವನ ಕಾಮಗಾರಿ ಕಳಪೆಯಿಂದ ಕೂಡಿದೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಕೆಆರ್‌ಐಡಿಎಲ್ ಎಂಜಿನಿಯರ್‌ಗಳ ಕಮಿಷನ್‌ ದುರಾಸೆಯಿಂದ ಈಗಾಗಲೇ ಆರಂಭ ಗೊಂಡಿರುವ 75ಲಕ್ಷ ರೂ. ವೆಚ್ಚದ ಕಾಮಗಾರಿ ಕಳೆಪೆ ಹಾಗೂ ಅವೈಜ್ಞಾನಿಕವಾಗಿ ಕೂಡಿದೆ ಎಂದು ವಿಷಯ ಪ್ರಸ್ತಾಪಿಸಿದ್ದರು. ಇದರ ಅನ್ವಯ ಇಂದು ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆದ ವೇಳೆ ಕೆಲಸ ಕಳಪೆಯಿಂದ ಕೂಡಿರುವುದು ಕಂಡುಬಂದಿದೆ. ಇಂದಿನಿಂದಲೇ ಕೆಲಸವನ್ನು ನಿರ್ವಹಿಸಬಾರದು. ಈಗ ನಿರ್ಮಾಣ ವಾಗಿರುವ ಕಟ್ಟಡವನ್ನು ನೆಲಸಮಗೊಳಿಸಿ ಹೊಸದಾಗಿ ಕೆಲಸ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು.

ಭವನ ಆವರಣ ಸಂಪೂರ್ಣವಾಗಿ ಮಲಿನ ವಾಗಿರುವ ಹಿನ್ನೆಲೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ. ಭವನದ ಸುತ್ತ ಗೋಡೆ ನಿರ್ಮಿಸಿರುವುದರಿಂದ ಒಳ ಭಾಗದಲ್ಲಿ ಎರಡು ಅಡಿ ನೀರು ನಿಂತಿದೆ. ಹೊರ ಭಾಗದ ಮೂರು ಕಡೆಯೂ ಐದು ಅಡಿ ನೀರು ನಿಂತಿದೆ. ಗೋಡೆ ಸುತ್ತಾ ಮಣ್ಣು ಹಾಕಿ ನೀರು ಹೊರಹೋಗುವಂತ್ತೆ ಸ್ವಚ್ಛಗೊಳಿಸಬೇಕೆಂದು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ನಾಗರಾಜು, ಜಿಪಂ ಸದಸ್ಯರಾದ ಶ್ರೀನಿವಾಸ್‌, ರೇವಣ್ಣ, ಬರಗೂರು ರವಿ, ರತ್ನಮ್ಮ, ತಾಪಂ ಸದಸ್ಯರಾದ ಮರೀಗೌಡ, ಮೀನಾ, ತಹಶೀಲ್ದಾರ್‌ ಶಿವರಾಜ್‌, ಇಒ ರವಿಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next