ಶ್ರೀರಂಗಪಟ್ಟಣ: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಭವನ ಹೆಸರಿಗಷ್ಟೇ ಭವನವಾಗಿದೆ. ಸ್ವಚ್ಛತೆ ಸೇರಿದಂತೆ ಇತರ ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿದೆ. ಬಡವರು ಸೇರಿ ಇತರ ಸಾರ್ವಜನಿಕರಿಗೆ ಸಣ್ಣ ಕಾರ್ಯಕ್ರಮಗಳಿಗೆ ಅಗತ್ಯವಾಗಿ ಸಿಗಬೇಕಾದ ಭವನ ಇದೀಗ ಕಸದ ಗೋದಾಮಾಗಿ ರೂಪುಗೊಂಡಿದೆ.
ಸುಮಾರು 18 ವರ್ಷಗಳ ಹಿಂದೆ ಪಟ್ಟಣಕ್ಕೆ ಸರ್ವರಿಗೂ ಅವಶ್ಯಕವಿದ್ದ ಒಂದು ಭವನ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣಗೊಂಡಿತ್ತು. ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಕಾಳಜಿಯಿಂದ ಭವನ ತಲೆ ಎತ್ತಿತ್ತು. ದಲಿತರು, ಹಿಂದುಳಿದ ವರ್ಗದವರ ಅನುಕೂಲಕ್ಕಲ್ಲದೆ ಇತರ ಸರ್ಕಾರಿ ಕಾರ್ಯ ಕ್ರಮಗಳಿಗೂ ನೀಡಲಾಗುತ್ತಿತ್ತು. ಅದರ ನಿರ್ವಹಣೆ ಯನ್ನು ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿತ್ತು.
ನಿರ್ವಹಣೆಯಲ್ಲಿ ಪುರಸಭೆ ವಿಫಲ: ಆ ನಂತರದಲ್ಲಿ ಇಲಾಖೆಯ ನಿರ್ವಹಣೆ ಸರಿಯಿಲ್ಲದ ಕಾರಣ ಆ ಜವಾಬ್ದಾರಿಯನ್ನು ಪಟ್ಟಣ ಪುರಸಭೆಗೆವಹಿಸಲಾಯಿತು. ಅದರ ವ್ಯಾಪ್ತಿಯೊಳಗೆ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಭವನ ನೀಡಲಾಗುತ್ತಿತ್ತು. ಪುರಸಭೆ ಕೂಡ ಭವನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಭವನದೊಳಗೆ ಹಾಕಿದ ಕುರ್ಚಿಗಳು ಎಲ್ಲೆಂದರಲ್ಲಿ ಬಿದ್ದಿವೆ.
ಕಸದಿಂದ ತುಂಬಿರುವ ಭವನ: ಕಾರ್ಯಕ್ರಮ ನಡೆಸುವ ಪ್ರಾಯೋಜಕರು ಎಸೆದಿರುವ ಲೋಟ, ತಟ್ಟೆ ಇತರೆ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸದೆ ಹಾಗೆಯೇ ಬಿಡುವುದರಿಂದ ಕಸ ತುಂಬಿ ತುಳುಕುತ್ತಿದೆ. ಸಂಬಂಧಿಸಿದ ಇಲಾಖೆಗಳು ಗಮನಹರಿಸದಿರುವುದು ಬೇಸರದ ಸಂಗತಿ. ಇದರ ನಿರ್ವಹಣೆ ಹೊತ್ತ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದಿರುವುದು ಮತ್ತೂಂದು ದುರಂತ. ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಸಾರ್ವಜನಿಕರು, ಸರ್ಕಾರ ನೀಡಿದ ಒಂದು ಭವನವನ್ನು ಸ್ವಚ್ಛತೆಗೊಳಿಸಿ ಅದರ ನಿರ್ವಹಣೆ ಮಾಡದಿರುವ ಪುರಸಭೆ ಅಧಿಕಾರಿಗಳು ಪಟ್ಟಣ ಸ್ವಚ್ಛತೆ ಹೇಗೆ ಮಾಡುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸ್ವಚ್ಛತೆ ಇಲ್ಲ: ಭವನದ ಮೂಲೆ ಮೂಲೆಯಲ್ಲಿ ಪ್ಲಾಸ್ಟಿಕ್ ಲೋಟ, ತಟ್ಟೆ, ಗಾಜಿನ ಬಾಟಲು ಸೇರಿ ಮದ್ಯದ ಬಾಟಲುಗಳೂ ಬಿದ್ದಿವೆ. ಕಾರ್ಯಕ್ರಮ ಮುಗಿದ ಬಳಿಕ ಮತ್ತೂಂದು ಕಾರ್ಯಕ್ರಮಕ್ಕೆ ನೀಡುವ ಭವನದ ಸ್ವಚ್ಛತೆ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಕಾರ್ಯಕ್ರಮ ಆಯೋಜಕರಿಗೂ ಭವನ ಮತ್ತು ಭವನದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕೆಂಬ ಪರಿಜ್ಞಾನವಿಲ್ಲ ಎಂದು ಸ್ಥಳೀಯ ನಿವಾಸಿ ಕುಬೇರಪ್ಪ ಅಸಮಧಾನ ವ್ಯಕ್ತಪಡಿಸಿದರು.
ಕಿಟಕಿ ಬಾಗಿಲು ಸರಿ ಇಲ್ಲ: ಮುನ್ನೋಟಕ್ಕೆ ಮಾತ್ರ ನೋಡಲು ಅಂದವಾಗಿ ಕಾಣುವ ಅಂಬೇಡ್ಕರ್ ಭವನ ಒಳ ಹೋದರೆ ಅಲ್ಲಲ್ಲಿ ತೂತುಬಿದ್ದ ಗೋಡೆಗಳು, ಕಿತ್ತು, ಮುರಿದಿರುವ ಕಿಟಕಿ, ಬಾಗಿಲುಗಳ ದರ್ಶನವಾಗುತ್ತದೆ. ಬಾಗಿಲು ಬಿಗಿ ಇಲ್ಲ. ಅಡುಗೆ ಮಾಡುವ ಕೋಣೆಗಳಿಲ್ಲ, ಕಟ್ಟಡದ ಹಿಂಭಾಗದಲ್ಲಿ ಸ್ವಲ್ಪ ಜಾಗ ಮಾಡಿ ಅದಕ್ಕೆ ಸಿಮೆಂಟ್ ಗಾರೆ ಹಾಕಿರುವುದನ್ನು ಬಿಟ್ಟರೆ ಬೇರೇನೂ ಅನುಕೂಲ ಕಲ್ಪಿಸಿಲ್ಲ. ಅಡುಗೆ ಮಾಡಿದ ನಂತರ ಬಿಟ್ಟ ನೀರು ಎಲ್ಲೂ ಹೊರ ಹೋಗದೆ ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ.
ಮದುವೆ, ಸಣ್ಣ ಪುಟ್ಟ ಸಮಾರಂಭಕ್ಕೆ ಯೋಗ್ಯವಾಗಿರಬೇಕಾದ ಭವನದಲ್ಲಿ ಬರೀ ಅವ್ಯವಸ್ಥೆಗಳೇ ಎದ್ದು ಕಾಣುತ್ತಿವೆ. ಶುದ್ಧ ನೀರು, ವಿದ್ಯುತ್ ದೀಪಗಳಿಲ್ಲದೆ ಅನಾಥ ಸ್ಥಿತಿಯಲ್ಲಿ ಕಟ್ಟಡವಿದೆ. ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ, ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಭವನದ ನಿರ್ವಹಣೆ ಬಗ್ಗೆ ಗಮನಹರಿಸಬೇಕಿದೆ.
● ಗಂಜಾಂ ಮಂಜು