Advertisement

ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಾಣ ಯೋಜನೆ ಮೂಲೆಗುಂಪು

04:29 PM Oct 23, 2017 | Team Udayavani |

ಸುಳ್ಯ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸುಸಜ್ಜಿತ ಅಂಬೇಡ್ಕರ್‌ಭವನ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸುವ ಆಕಾಂಕ್ಷೆ ಇನ್ನೂ ಈಡೇರಿಲ್ಲ. 

Advertisement

ಸುಳ್ಯ ನಗರದಲ್ಲಿ ಐದು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಸೂಕ್ತ ಅನುದಾನ ಲಭ್ಯವಾಗದೇ ಸ್ಥಗಿತಗೊಂಡಿದ್ದು, ಹಿಂದೆ ನಡೆಸಿದ ಕಾಮಗಾರಿಯ ಕಬ್ಬಿಣದ ಪಿಲ್ಲರ್‌ಗಳು ತುಕ್ಕು ಹಿಡಿದು ನಶಿಸುತ್ತಿವೆ. ಪಿಲ್ಲರ್‌ಗಳ ಸುತ್ತ ಕಾಡು ಬೆಳೆದು ಪಾಳುಬಿದ್ದಿದೆ.

ಅತೀ ದೊಡ್ಡ ಸುಸಜ್ಜಿತ ಭವನ ತಾ|ನ ಬೃಹತ್‌ ಯೋಜನೆಗಳಲ್ಲೊಂದಾಗಿತ್ತು. ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿದ್ದರೆ ಮೀಸಲು ಕ್ಷೇತ್ರವಾದ ಸುಳ್ಯಕ್ಕೆ ಈ ಭವನ ಪ್ರತಿಷ್ಠೆಯ ಸಂಕೇತವಾಗಿರುತ್ತಿತ್ತು. . ಅಲ್ಲದೆ, ದಲಿತ ಸಮುದಾಯದ ಅನೇಕ ಕಾರ್ಯಕ್ರಮಗಳಿಗೆ ಇದು ಅತೀ ಕಡಿಮೆ ಬಾಡಿಗೆಯಲ್ಲಿ ದೊರಕುತ್ತಿತ್ತು. ಹೀಗಾಗಿ ಇಂತಹ ಯೋಜನೆ ಹುಟ್ಟುಹಾಕಿದ್ದು ಶಾಸಕ ಅಂಗಾರ ಅವರು. ಅವರ ಪ್ರಯತ್ನದಿಂದ ಸ್ವಲ್ಪ ಕಾಮಗಾರಿ ಆರಂಭ ಗೊಂಡಿತ್ತಾದರೂ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೇ ಸ್ಥಗಿತಗೊಂಡಿದೆ. ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರು ಕಾಮಗಾರಿ ಚುರುಕು ಗೊಳಿಸಲು ಬೇಕಿರುವ ಅಗತ್ಯ ಅನುದಾನ ತತ್‌ಕ್ಷಣ ನೀಡುವುದಾಗಿ ಭರವಸೆ ನೀಡಿದ್ದರೂ ಅನುದಾನ ಲಭ್ಯವಾಗಿಲ್ಲ.

3 ಕೋ. ರೂ. ವೆಚ್ಚ
ಐದು ವರ್ಷಗಳ ಹಿಂದೆ ಶಾಸಕರ ಆಶಯದಂತೆ 3 ಕೋಟಿ ರೂ.ವೆಚ್ಚದ ಭವನಕ್ಕೆ ನೀಲನಕ್ಷೆ ರಚನೆಗೊಂಡು, ಅಂದಾಜು 3 ಕೋಟಿ ರೂ. ವೆಚ್ಚದ ಕಟ್ಟಡಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ. ಮಂಜೂರಾಗಿತ್ತಾದರೂ ಬಿಡುಗಡೆಯಾಗಿದ್ದು 50 ಲಕ್ಷ ರೂ. ಮಾತ್ರ. ಬಿಡುಗಡೆಯಾದ ಅನುದಾನದ ಕಾಮಗಾರಿ ನಡೆದಿದೆ. ಉಳಿದ ಮೊತ್ತ ಬಾಕಿಯಿರುವುದರಿಂದ ಸ್ಥಗಿತವಾಗಿದೆ.

ಒಟ್ಟು ನಾಲ್ಕು ಮಹಡಿಯ ಕಟ್ಟಡದಲ್ಲಿ 1000 ಮಂದಿ ಕುಳಿತು ಕೊಳ್ಳ ಬಹುದಾದಷ್ಟು ಆಸನಗಳಿರುವ ಸುಸಜ್ಜಿತ ವೇದಿಕೆ, ಸಭಾ ಭವನ, ಪಾಕ ಶಾಲೆ, ಊಟದ ಹಾಲ್‌, ಸ್ನಾನಗೃಹ, ಶೌಚಾಲಯ, ಲಿಫ್ಟ್ ವ್ಯವಸ್ಥೆಗಳನ್ನು ಅಳವಡಿಸಲು ನಿರ್ಧರಿಸಲಾಗಿತ್ತು. ಸರಕಾರಕ್ಕೆ ಹೆಚ್ಚು ಒತ್ತಡ ತಂದರೆ ಮಾತ್ರ ಭವನ ಪೂರ್ಣಗೊಂಡೀತು.

Advertisement

ಸ್ಪಂದಿಸಿಲ್ಲ
ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಅನೇಕ ಬಾರಿ ಸರಕಾರದ ಗಮನ ಸೆಳೆದಿದ್ದೇನೆ. ಆದರೆ ಸ್ಪಂದಿಸಿಲ್ಲ. ಬಾಕಿಯಿರುವ ಅನುದಾನ ಬಿಡುಗಡೆಗೊಳಿಸಿದರೆ ಉಳಿದ ಮೊತ್ತವನ್ನು ವಿವಿಧ ಮೂಲಗಳಿಂದ ತರಿಸಿಕೊಳ್ಳುವ ಪ್ರಯತ್ನ ನನ್ನದು.
ಎಸ್‌. ಅಂಗಾರ, ಶಾಸಕರು, ಸುಳ್ಯ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next