ಕನಕಪುರ: ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ರ ಹೆಸರಿನಲ್ಲಿ ಪ್ರತಿದಿನ ಸಾವಿರಾರು ಸಂಘ-ಸಂಸ್ಥೆಗಳು, ಟ್ರಸ್ಟ್‌ಗಳು, ಮಹಿಳಾ ಸಂಘಗಳು ಹುಟ್ಟುತ್ತಿವೆ. ಆದರೆ, ಬಹುತೇಕರು ಅಂಬೇಡ್ಕರ್‌ರ ಚಿಂತನೆಗಳನ್ನು ಅಳವಡಿಸಿಕೊಳ್ಳುತ್ತಿಲ್ಲ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ವಿಷಾದಿಸಿದರು.
ತಾಲೂಕಿನ ಕಸಬಾ ಅರಳಾಳು ಗ್ರಾಮದಲ್ಲಿ ಭೀಮರಾವ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಹುತೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್‌ರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ವಿಚಾರ ಕ್ರಾಂತಿಗಳನ್ನು ಮೈಗೂಡಿಸಿ ಕೊಳ್ಳದೇ ವಿಜೃಂಭಣೆ ಜಯಂತಿ ಆಚರಣೆಗಳಲ್ಲಿ ತೊಡಗಿಸಿಕೊಳ್ಳುತ್ತಿವೆ. ಇದರಿಂದ ಅಂಬೇಡ್ಕರ್‌ರ ತತ್ವಸಿದ್ಧಾಂತಗಳು ಏಳ್ಗೆ ಹೊಂದುವುದಿಲ್ಲ ಎಂದರು.
ದಲಿತ, ಹಿಂದುಳಿದವರ, ಅಲ್ಪಸಂಖ್ಯಾತರ ವರ್ಗದ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಅಸ್ಪೃಶ್ಯತೆ, ಅನಾಗರಿಕತೆ ತೊಡೆದು ಹಾಕುವ ನಿಟ್ಟಿನಲ್ಲಿ ಉತ್ತಮ ಸಮಾಜ ಕಟ್ಟುವ ಅಗತ್ಯವಿದೆ. ಇಂತಹ ಸಾಮಾಜಿಕ ಬದಲಾವಣೆಯನ್ನು ತರುವ ರಾಷ್ಟ್ರೀಯ ಪಕ್ಷದ ನಾಯಕರು ಇತ್ತ ಗಮನಹರಿಸದೇ ವೈಯಕ್ತಿಕ ಹಿತಾಸಕ್ತಿಗೆ ಜನರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆಂದರು.
ಅಭಿವೃದ್ಧಿ ಮಾಡಿ:ಹೊಸ ಸಂಘ-ಸಂಸ್ಥೆಗಳು ಹುಟ್ಟುವುದು ಕೊನೆಗೊಳ್ಳುವುದು ಸಾಮಾನ್ಯ. ಹುಟ್ಟಿದ ಸಂಘಗಳು ತಾವಿರುವ ಸ್ಥಳದ ಜನರ ಪ್ರಗತಿಗಾಗಿ ಮತ್ತು ಅಲ್ಲಿನ ಅಭಿವೃದ್ಧಿಗಾಗಿ ಜನರನ್ನು ಜಾಗೃತಗೊಳಿಸುವ ಮೂಲಕ ಹೋರಾಟದ ಮೂಲಕ ಅವರಿಗೆ ಸರ್ಕಾರಿ ಸವಲತ್ತು ಕೊಡಿಸುವಂತಹ ಕೆಲಸವನ್ನು ಮಾಡಿದಾಗ ಸಂಘ ಸ್ಥಾಪನೆಯಾಗಿದ್ದಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹೋರಾಟಮನೋಭಾವವಿರಲಿ:ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ಮಲ್ಲಿಕಾ ರ್ಜುನ್, ಕಳೆದ 20 ವರ್ಷಗಳ ಹಿಂದೆ ಅರಳಾಳು ಗ್ರಾಮದಲ್ಲಿ ಜಮೀನೊಂದರ ವಿಚಾರದಲ್ಲಿ ಉಂಟಾದ 2 ಕೋಮುಗಳ ಘರ್ಷಣೆಯಲ್ಲಿ ಅಮಾಯಕ ಮುಗ್ಧ ದಲಿತರಾದ 98 ಮಂದಿಯನ್ನು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗಿತ್ತು. ಅಂದು ಪರಿಷತ್ ಸದಸ್ಯರಾಗಿದ್ದ ಸಿದ್ದಲಿಂಗಯ್ಯ ನವರು ದಲಿತರ ಪರ ನಿಂತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದು ದಲಿತರ ಪರಿಸ್ಥಿತಿಯನ್ನು ಗಮನಕ್ಕೆ ತಂದಾಗ 24 ಗಂಟೆಯೊಳಗಾಗಿ ಅಂದಿನ ಸರ್ಕಾರ ಎಲ್ಲರನ್ನೂ ಬಿಡುಗಡೆಗೊಳಿಸಿದ ಕೀರ್ತಿ ಡಾ.ಸಿದ್ದಲಿಂಗಯ್ಯ ನವರಿಗೆ ಸಲ್ಲುತ್ತದೆ. ಇಂತಹ ನೂರಾರು ಹೋರಾಟಗಳನ್ನು ಮಾಡುವ ಮೂಲಕ ದೀನ, ದಲಿತರ, ದುರ್ಬಲರ ದನಿಯಾಗಿರುವ ಇವರ ಹೋರಾಟ ಇನ್ನೂ ಸಮಾಜಕ್ಕೆ ಬೇಕಾಗಿದೆ ಎಂದರು. ಈ ವೇಳೆ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯ ರನ್ನು ಸನ್ಮಾನಿಸಲಾಯಿತು. ಆಕಾಶ್, ಶಿವರಾಮ್, ರಮೇಶ್ ಮತ್ತವರ ತಂಡ ಅಂಬೇಡ್ಕರ್‌ರ ಕ್ರಾಂತಿಗೀತೆ ಹಾಡಿದರು. ಶಿವನಹಳ್ಳಿ ಗ್ರಾಪಂ ಸದಸ್ಯ ಪ್ರೇಮ್‌ಕುಮಾರ್, ವಕೀಲ ಮುನಿಚಿಕ್ಕಯ್ಯ, ಅಂಬೇಡ್ಕರ್ ಕಾಲೇಜಿನ ಎ.ಪಿ.ಕುಮಾರ್, ಶಿವಲಿಂ ಗಯ್ಯ, ಟ್ರಸ್ಟ್ ಪದಾಧಿಕಾರಿಗಳಾದ ಕುಮಾರ್, ಆನಂದ್, ಪ್ರತಾಪ್, ರಾಜು, ಮಹದೇವ, ಭೀಮಾ ಮತ್ತಿತರರು ಉಪಸ್ಥಿತರಿದ್ದರು.