ಚೆನ್ನೈ: ಐಪಿಎಲ್ ಟ್ರೋಫಿಯನ್ನುಕೆಕೆಆರ್ ಗೆದ್ದ ನಂತರ ಮಾಜಿ ಬ್ಯಾಟ್ಸ್ ಮ್ಯಾನ್ ಅಂಬಟಿ ರಾಯುಡು ಮತ್ತೊಂದು ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದು, ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನ ತಜ್ಞರ ಸಮಿತಿಯ ಭಾಗವಾಗಿರುವ ರಾಯುಡು, ಮಾಜಿ ಕ್ರಿಕೆಟ್ ದಿಗ್ಗಗರಾದ ಕೆವಿನ್ ಪೀಟರ್ಸನ್, ಮ್ಯಾಥ್ಯೂ ಹೇಡನ್, ಕ್ರೀಡಾ ನಿರೂಪಕಿ ಮಾಯಾಂತಿ ಲ್ಯಾಂಗರ್ ಅವರೊಂದಿಗೆ ಕಾರ್ಯಕ್ರಮದ ಭಾಗವಾಗಿದ್ದ ವೇಳೆ ಹೇಳಿಕೆ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವನ್ನು ಶ್ಲಾಘಿಸಿದರು ಮತ್ತು ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪರೋಕ್ಷ ಟಾಂಗ್ ನೀಡಿದರು. ‘ಆರೆಂಜ್ ಕ್ಯಾಪ್‌ನಂತಹ ವೈಯಕ್ತಿಕ ಪುರಸ್ಕಾರಗಳು ಐಪಿಎಲ್ ಪ್ರಶಸ್ತಿಯನ್ನು ಖಾತರಿಪಡಿಸುವುದಿಲ್ಲ’ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದರು. ಈ ಬಗ್ಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.
ರಾಯುಡು ಅವರ ನಿಲುವು ಮತ್ತು ಆಲೋಚನೆಗಳನ್ನು ಪೀಟರ್ಸನ್ ಮತ್ತು ಮಾಯಾಂತಿ ವಿರೋಧಿಸಿದರು, ಆದರೆ ಭಾರತದ ಮಾಜಿ ಬ್ಯಾಟ್ಸ್ ಮ್ಯಾನ್ ಹೇಳಿಕೆಗೆ ದೃಢವಾಗಿ ಉಳಿದರು, ಈ ಚಿಂತನೆಯ ಹಿಂದಿನ ತಾರ್ಕಿಕತೆಯನ್ನೂ ವಿವರಿಸಿದರು.
“ಸುನಿಲ್ ನಾರಾಯಣ್, ರಸೆಲ್ ಮತ್ತು ಸ್ಟಾರ್ಕ್ ಅವರಂತಹ ಪ್ರಮುಖ ಆಟಗಾರರನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ತಂಡದ ಐಪಿಎಲ್ ಗೆಲುವಿಗೆ ಸಾಮೂಹಿಕ ಕೊಡುಗೆಗಳಿಗಾಗಿ ಕೆಕೆಆರ್ ತಂಡವು ಅಭಿನಂದನೆಗಳಿಗೆ ಅರ್ಹವಾಗಿದೆ. ಐಪಿಎಲ್ ಗೆಲ್ಲುವುದು ಆರೆಂಜ್ ಕ್ಯಾಪ್‌ನಂತಹ ವೈಯಕ್ತಿಕ ಪುರಸ್ಕಾರಗಳಿಂದಲ್ಲ, ಬದಲಿಗೆ ಅನೇಕ ಆಟಗಾರರ ಪ್ರಯತ್ನಗಳಿಂದ’ ಎಂದು ರಾಯುಡು ಹೇಳಿದರು.
ಐಪಿಎಲ್ 2024 ರ ಋತುವಿನಲ್ಲಿ, ನಾಲ್ವರು ಕೆಕೆಆರ್ ಬ್ಯಾಟ್ಸ್ ಮ್ಯಾನ್ ಗಳು ಮಿಂಚಿದರು, ಪ್ರತಿಯೊಬ್ಬರೂ 350 ಕ್ಕೂ ಹೆಚ್ಚು ರನ್ ಗಳಿಸಿದರು. ಆರಂಭಿಕ ಆಟಗಾರ ಸುನಿಲ್ ನಾರಾಯಣ್ 15 ಪಂದ್ಯಗಳಲ್ಲಿ ಗಮನಾರ್ಹ 488 ರನ್ ಗಳಿಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೋಲ್ಕತಾ ತಂಡಕ್ಕೆ ಸಾಲ್ಟ್ 435 ರನ್, ವೆಂಕಟೇಶ್ 370 ಮತ್ತು ನಾಯಕ ಶ್ರೇಯಸ್ 354 ರನ್ ಕೊಡುಗೆ ನೀಡಿದರು ಆದರೆ ಕೊಹ್ಲಿ ಹೊರತುಪಡಿಸಿ ಆರ್‌ಸಿಬಿ ಆಟಗಾರರ ಪ್ರದರ್ಶನ ಸ್ಥಿರವಾಗಿರಲಿಲ್ಲ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ ಸಿಬಿ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿದ ನಂತರ ”ವಿರಾಟ್ ಕೊಹ್ಲಿಯವರ ರಭಸದ ಫಾರ್ಮ್ ಅವರ ಸಹ ಆಟಗಾರರಿಗೆ ಹೊರೆಯಾಗುತ್ತಿದೆ’ ಎಂದು ಹೇಳಿ ರಾಯುಡು ಆಕ್ರೋಶಕ್ಕೆ ಗುರಿಯಾಗಿದ್ದರು. ಕೊಹ್ಲಿ ಅವರ ಸಾಧನೆ ಎದುರು ರಾಯುಡು ತೃಣ ಮಾತ್ರ ಎಂದು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದರು.