ಬೆಂಗಳೂರು: ಚುನಾವಣಾ ಸಿದ್ದತೆಗಳಿಗೆ ದಿನಕಳೆದಂತೆ ವೇಗ ನೀಡುತ್ತಿರುವ ಚುನಾವಣಾ ಆಯೋಗ, ಇದೀಗ ಮತದಾರರಲ್ಲಿ ಜಾಗೃತಿ ಮೂಡಿಸಲು “ಚುನಾವಣಾ ರಾಯಭಾರಿ’ಯ ಹುಡುಕಾಟದಲ್ಲಿದ್ದು, ಈ ವಾರದೊಳಗೆ ರಾಯಭಾರಿ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಿತ್ರರಂಗ, ಕ್ರೀಡೆ ಹಾಗೂ ಸೇನೆ ಸೇರಿಕೊಂಡಂತೆ ಈ ಬಾರಿಯ ಚುಣಾವಣಾ ಘೋಷ ವಾಕ್ಯವಾಗಿರುವ “ಆ್ಯಕ್ಸಿಸೆಬಲ್ ಎಲೆಕ್ಷನ್’ಗೆ ಪೂರಕವಾಗಿ ವಿಕಲಚೇತನ ಸಾಧಕರನ್ನು ಚುನಾವಣಾ ರಾಯಭಾರಿಯನ್ನಾಗಿ ಮಾಡುವ ಆಲೋಚನೆ ಚುನಾವಣಾ ಆಯೋಗದ ಮುಂದಿದೆ.
ಈ ಸಂಬಂಧ ಚುನಾವಣಾ ಆಯೋಗದ ಎರಡು ತಂಡಗಳು ಕಾರ್ಯಪ್ರವೃತ್ತವಾಗಿದ್ದು, ಚಿತ್ರರಂಗ, ಕ್ರೀಡೆ, ಸೇನೆ ಹಾಗೂ ವಿಕಲಚೇತನ ಸಾಧಕರನ್ನು ಗುರುತಿಸುವ ಕೆಲಸ ಈ ತಂಡಗಳು ಮಾಡುತ್ತಿವೆ. ಕಳೆದ ವಿಧಾನಸಭೆ ಚುನಾವಣೆಗೆ ನಟ ಪುನಿತ್ ರಾಜ್‌ಕುಮಾರ್ ರಾಯಭಾರಿಯಾಗಿದ್ದರು. ಈ ಬಾರಿ ಚಿತ್ರರಂಗದಿಂದ ರಕ್ಷಿತ್ ಶೆಟ್ಟಿ, ಯಶ್ ಮತ್ತಿತರರ ಹೆಸರುಗಳು, ಅದೇ ರೀತಿ ಕ್ರೀಡಾ ಕ್ಷೇತ್ರದಿಂದ ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಸೇರಿದಂತೆ ಇತ್ತೀಚಿಗೆ ಕ್ರಿಕೆಟ್ ಹಾಗು ಇತರ ಕ್ರೀಡೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಯುವ ಕ್ರೀಡಾಪಟುಗಳ ಹೆಸರುಗಳನ್ನು ಪರಿಗಣಿಸಬಹುದಾ..? ಎಂಬ ಪ್ರಾಥಮಿಕ ಹಂತದ ಆಲೋಚನೆಗಳು ಚುನಾವಣಾ ಆಯೋಗದಲ್ಲಿ ನಡೆದಿವೆ. ಆದರೆ, ಈವರೆಗೆ ಯಾವ ಹೆಸರೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ ಈ ಬಾರಿ ಘೋಷವಾಕ್ಯ ಆಕ್ಸಿಸೆಬಲ್ ಎಲೆಕ್ಷನ್ (ಸುಲಭಸಾಧ್ಯ ಚುನಾವಣೆ) ಆಗಿರುವುದರಿಂದ ವಿಕಲಚೇತನ ಸಾಧಕರನ್ನೂ ರಾಯಭಾರಿಯನ್ನಾಗಿ ಮಾಡಬಹುದಾ ಎಂಬ ಚರ್ಚೆಗಳು ನಡೆದಿದೆ. ಇದಕ್ಕಾಗಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಾಹಿತಿ ಕೇಳಲಾಗಿದೆ.
ಸೇನೆಯಲ್ಲಿ ಕರ್ತವ್ಯ ನಿರತರಿಗೆ ಮತದಾನದ ಹಕ್ಕು ಚಲಾಯಿಸಲು “ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಂ’ (ಇಟಿಪಿಬಿಎಸ್) ಜಾರಿಗೆ ತರುತ್ತಿರುವುದರಿಂದ ಸೇನೆಯ ನಿವೃತ್ತರೊಬ್ಬರನ್ನೂ ರಾಯಭಾರಿಯನ್ನಾಗಿ ಪರಿಗಣಿಸಬಹುದೇ, ವಿಶೇಷವಾಗಿ ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸಲು ಸಾಧಕಿ ಮಹಿಳೆಯೊಬ್ಬರನ್ನು ರಾಯಭಾರಿಯನ್ನಾಗಿ ಮಾಡಬಹುದಾ ಎಂಬ ಆಲೋಚನೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.