Advertisement

ಅಂಬರೀಶ್ ಜನ್ಮದಿನ: ರೆಬೆಲ್‌ಸ್ಟಾರ್‌ ನೆನಪಿನಲ್ಲಿ ಅಭಿಮಾನಿಗಳ ಸಾಮಾಜಿಕ ಕಾರ್ಯ

08:24 AM May 29, 2022 | Team Udayavani |

ಇಂದು (ಮೇ. 29) ಕನ್ನಡ ಚಿತ್ರರಂಗದ ರೆಬೆಲ್‌ಸ್ಟಾರ್‌ ಖ್ಯಾತಿಯ ನಟ ಅಂಬರೀಶ್‌ ಅವರ 70ನೇ ಹುಟ್ಟುಹಬ್ಬ. ಇನ್ನು ಅಂಬರೀಶ್‌ ದೈಹಿಕವಾಗಿ ಚಿತ್ರರಂಗವನ್ನು ಅಗಲಿ ನಾಲ್ಕು  ವರ್ಷಗಳು ಕಳೆದರೂ, ಅಭಿಮಾನಿಗಳ ಮನದಲ್ಲಿ ಅಂಬರೀಶ್‌ ನೆನಪು ಸದಾ ಹಸಿರಾಗಿದೆ. ಹೀಗಾಗಿಯೇ ಅಂಬರೀಶ್‌ ಅನುಪಸ್ಥಿತಿಯಲ್ಲೂ ಅವರ ಅಭಿಮಾನಿಗಳು ಅಂಬರೀಶ್‌ ಅವರ ಜನ್ಮದಿನವನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

Advertisement

ಇನ್ನು ಅಂಬರೀಶ್‌ ಇದ್ದ ಸಮಯದಲ್ಲಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಅಂಬರೀಶ್‌ ಸಮ್ಮುಖದಲ್ಲಿಯೇ ಅದ್ಧೂರಿಯಾಗಿ ಆಚರಿಸುತ್ತಿದ್ದರು. ತಮ್ಮ ನೆಚ್ಚಿನ ನಟನನ್ನು ಕಾಣಲು ದೂರ ಊರುಗಳಿಂದ ಬರುತ್ತಿದ್ದ ಅಭಿಮಾನಿಗಳಿಗಾಗಿ, ಅವರ ಭೇಟಿಗಾಗಿ ತಮ್ಮ ಜನ್ಮದಿನವನ್ನು ಮೀಸಲಾಗಿಡುತ್ತಿದ್ದರು. ಅಂಬರೀಶ್‌ ಅಗಲಿಕೆಯ ನಂತರ ಅವರ ಜನ್ಮದಿನವನ್ನು ಸಾಮಾಜಿಕ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತ ಬಂದಿದ್ದಾರೆ.

ಆದ್ರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಅಂಬರೀಶ್‌ ಅವರ ಅದ್ಧೂರಿ ಜನ್ಮದಿನದ ಆಚರಣೆ ಅಭಿಮಾನಿಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕೋವಿಡ್‌ ಆತಂಕ ಕಡಿಮೆಯಾಗಿರುವುದರಿಂದ, ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅಂಬಿ ಅಭಿಮಾನಿಗಳು ಭರದ ಸಿದ್ದತೆ ನಡೆಸಿದ್ದಾರೆ.

ಜನ್ಮದಿನದ ಪ್ರಯುಕ್ತ ಅಂಬರೀಶ್‌ ಸಮಾಧಿ ಸ್ಥಳದಲ್ಲಿ ಮೊದಲಿಗೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಗುತ್ತಿದ್ದು, ಅದಾದ ಬಳಿಕ ಅನ್ನದಾನ, ರಕ್ತದಾನ, ನೇತ್ರದಾನ ಮುಂತಾದ ಸಾಮಾಜಿಕ ಕಾರ್ಯಗಳನ್ನು ನಡೆಸಲು ಅಭಿಮಾನಿಗಳು ಯೋಜನೆ ಹಾಕಿಕೊಂಡಿದ್ದಾರೆ.  ಇನ್ನು ಅಂಬರೀಶ್‌ ಅವರ ತವರೂರಾದ ಮಂಡ್ಯ ಜಿಲ್ಲೆಯಲ್ಲಿಯೂ ಅಭಿಮಾನಿಗಳು ಅಂಬಿ ಬರ್ತ್‌ಡೇಗೆ ಜೋರಾಗಿ ತಯಾರಿ ಮಾಡಿಕೊಂಡಿದ್ದಾರೆ.

ಪುಟ್ಟಣ್ಣ ಕಣಗಾಲ ಗರಡಿಯಲ್ಲಿ “ಜಲಿಲಾ’ನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಂಬರೀಶ್‌, “ಚಕ್ರವ್ಯೂಹ’ವನ್ನು ಭೇದಿಸಿ ನಾಡಿನ ಜನತೆ ಪಾಲಿಗೆ “ರೆಬೆಲ್‌ ಸ್ಟಾರ್‌’ ಅನಿಸಿಕೊಂಡರು. ತೆರೆಮೇಲೆ “ಅಂತ’ ನಾಗಿ ಮಂಡ್ಯದ ಜನತೆ ಪಾಲಿಗೆ “ಮಂಡ್ಯದ ಗಂಡಾ’ಗಿ ಮೆರೆದ “ಕಲಿಯುಗ ಕರ್ಣ’ನಿಗೆ ಚಿತ್ರರಂಗ ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣ ಗಳಲ್ಲಿ ಜನ್ಮದಿನದಂದು ಸ್ಮರಿಸುತ್ತಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next