Advertisement

ಅಂಬರೀಷ

03:37 PM Feb 23, 2017 | Harsha Rao |

ಅಂಬರೀಷನು ಒಬ್ಬ ದೊಡ್ಡ ಚಕ್ರವರ್ತಿ. ನಾಭಾಗನ ಮಗ. ಅವನಿಗೆ ವೈಭವ ಭೋಗಗಳು ಬೇಕಿರಲಿಲ್ಲ. ಬಹಳ ಧರ್ಮದಿಂದ ರಾಜ್ಯವಾಳುತ್ತಿದ್ದ. ಬರುಬರುತ್ತಾ ಅವನಿಗೆ ಪ್ರಾಪಂಚಿಕ ಜೀವನದಲ್ಲಿ ಆಸಕ್ತಿಯು ಹೋಗಿ ಸದಾ ಭಗವಂತನ ಧ್ಯಾನ, ಪೂಜೆ, ಸೇವೆ, ಸಜ್ಜನರ ಸಂಗ ಇವುಗಳಲ್ಲಿ ಮಗ್ನನಾಗಿರುತ್ತಿದ್ದನು. ಶ್ರೀಹರಿಯು ಅವನ ಭಕ್ತಿವೈರಾಗ್ಯಗಳನ್ನು ಮೆಚ್ಚಿ ತನ್ನ ಚಕ್ರಾಯುಧವನ್ನೇ ಅವನಿಗೆ ಕೊಟ್ಟನು.

Advertisement

ಅಂಬರೀಷನು ಹೆಂಡತಿಯೊಡನೆ ದ್ವಾದಶ ವ್ರತವನ್ನು ಒಂದು ವರ್ಷ ಆಚರಿಸಿದ. ಕಡೆಯಲ್ಲಿ ಕಾರ್ತಿಕ ಮಾಸದ ದ್ವಾದಶಿಗೆ ಮೊದಲು ಮೂರು ದಿನಗಳ ಉಪವಾಸವಿದ್ದು ನಾಲ್ಕನೆಯ ದಿನ, ದ್ವಾದಶಿ ಶ್ರೀಹರಿಯ ಪೂಜೆಯ ಮಾಡಿ ಉದಾರವಾಗಿ ದಾನಗಳನ್ನು ಕೊಟ್ಟ. ಆನಂತರ ತಾನು ಪಾರಣೆಯನ್ನು ಮಾಡುವುದರಲ್ಲಿದ್ದ. ಆ ಹೊತ್ತಿಗೆ ಮಹರ್ಷಿ ದೂರ್ವಾಸರು ಬಂದರು. ಅವರನ್ನು ಭೋಜನ ಮಾಡಬೇಕೆಂದು ಬೇಡಿದ. ಅವರು ಒಪ್ಪಿ, ಸ್ನಾನ ಮತ್ತು ಧ್ಯಾನಕ್ಕಾಗಿ ಯಮುನಾ ನದಿಗೆ ಹೋದರು. ಎಷ್ಟು ಹೊತ್ತು ಕಾದರೂ ಹಿಂದಿರುಗಲಿಲ್ಲ. ಪಾರಣೆಯನ್ನು ಮುಗಿಸಬೇಕಾಗಿದ್ದ ಮುಹೂರ್ತದ ಸಮಯ ಮೀರುತ್ತಿತ್ತು. ಆ ಸಮಯವನ್ನು ಮೀರುವಂತಿಲ್ಲ. ಅತಿಥಿಗಳಾದ ಮಹರ್ಷಿಗಳನ್ನು ಬಿಟ್ಟು ಊಟ ಮಾಡುವಂತಿಲ್ಲ. ಇಂತಹ ಧರ್ಮಸಂಕಟದಲ್ಲಿ ರಾಜನು ಸಿಕ್ಕಿಹಾಕಿಕೊಂಡನು. ಶಾಸ್ತ್ರ ಬಲ್ಲವರ ಮಾರ್ಗದರ್ಶನವನ್ನು ಕೇಳಿದ. ಅವರು ಸ್ವಲ್ಪ ನೀರು ಕುಡಿದರೆ ಪಾರಣೆ ಮಾಡಿದಂತೆಯೇ ಎಂದು ಹೇಳಿದರು. ಹಾಗೆಯೇ ಸ್ವಲ್ಪ ನೀರು ಕುಡಿದು ರಾಜನು ದೂರ್ವಾಸರಿಗಾಗಿ ಕಾದ.

ಮಹರ್ಷಿಗಳು ಬಂದರು. ಅಂಬರೀಷನು ನೀರನ್ನು ಕುಡಿದಿದ್ದಾನೆ ಎಂಬ ಸಂಗತಿಯು ಅವರ ದಿವ್ಯದೃಷ್ಟಿಗೆ ತಿಳಿಯಿತು. ಅವರ ಕೋಪ ಉಕ್ಕಿತು. “ನೀಚ. ಅತಿಥಿಯಾದ ನನ್ನನ್ನು ಬಿಟ್ಟು ಪಾರಣೆಯನ್ನು ಮುಗಿಸಿದೆಯಾ? ನಿನಗೆ ಶಿಕ್ಷೆಯಾಗಬೇಕು’ ಎಂದು ತಮ್ಮ ಜಟೆಯಿಂದ ಒಂದು ಕೂದಲನ್ನು ನೆಲಕ್ಕೆ ಬಡಿದರು. ಭಯಂಕರ ರೂಪದ ಉರಿಯನ್ನು ಚೆಲ್ಲುವ ಒಂದು ಮಾರಿ ಪ್ರತ್ಯಕ್ಷವಾಯಿತು. ಅದು ಗರ್ಜಿಸುತ್ತಾ ಅಂಬರೀಷನ ಬಳಿಗೆ ಬಂತು. ಆದರೆ ಅವನು ಸ್ವಲ್ಪವೂ ಹೆದರದೆ ವಿಷ್ಣುವಿನ ಧ್ಯಾನವನ್ನು ಮಾಡತೊಡಗಿದ. ವಿಷ್ಣುಚಕ್ರವು ಕಾಣಿಸಿಕೊಂಡು ಆ ಮಾರಿಯನ್ನು ಸುಟ್ಟುಹಾಕಿತು, ದೂರ್ವಾಸರತ್ತ ಸಾಗಿತು. ದೂರ್ವಾಸರು ಓಡಿದರು, ವಿಷ್ಣುಚಕ್ರವು ಅಟ್ಟಿಸಿಕೊಂಡುಹೋಯಿತು. ದೂರ್ವಾಸರು ಬ್ರಹ್ಮನ ಮೊರೆ ಹೊಕ್ಕರು. ಆದರೆ ಬ್ರಹ್ಮನು ವಿಷ್ಣುವನ್ನೇ ಬೇಡಿಕೊಳ್ಳುವಂತೆ ಹೇಳಿದ. ಅವರು ವಿಷ್ಣುವಿನ ಬಳಿಗೇ ಹೋದರು.

ವಿಷ್ಣುವು “ನಾನು ಭಕ್ತರ ಅಧೀನ. ನೀವು ಕೊಲ್ಲಲು ಪ್ರಯತ್ನಿಸಿದ್ದು ಅಂಬರೀಷನನ್ನು. ಅವನನ್ನೇ ಪ್ರಾರ್ಥಿಸಿ’ ಎಂದ. ದೂರ್ವಾಸರು ವಿಧಿ ಇಲ್ಲದೆ ಅಂಬರೀಷನ ಮೊರೆ ಹೊಕ್ಕರು. ಅವನು ವಿಷ್ಣು ಚಕ್ರಕ್ಕೆ ಪ್ರಾರ್ಥನೆ ಮಾಡಿದನು. ಚಕ್ರವು ಶಾಂತವಾಯಿತು. ದೂರ್ವಾಸರು ಅಂಬರೀಷನನ್ನು ಹೊಗಳಿದರು.

ಇದೆಲ್ಲಾ ಮುಗಿಯುವವರೆಗೆ ಅಂಬರೀಷನು ಊಟ ಮಾಡದೇ ಇದ್ದ. ಎಲ್ಲ ಶಾಂತವಾದ ನಂತರ ತನ್ನ ಆತಿಥ್ಯವನ್ನು ಸ್ವೀಕರಿಸುವಂತೆ ಪ್ರಾರ್ಥಿಸಿದ. ಅವರು ಭೋಜನವನ್ನು ಸ್ವೀಕರಿಸಿ, ಅವನನ್ನು ಆಶೀರ್ವದಿಸಿ ಹೋದರು. ಆನಂತರ ಅಂಬರೀಷನು ಊಟ ಮಾಡಿದ. ಕೆಲವು ದಿನಗಳ ನಂತರ ರಾಜ್ಯವನ್ನು ಮಕ್ಕಳಿಗೆ ಒಪ್ಪಿಸಿ ತಾನು ತಪಸ್ಸು ಮಾಡಲು ಕಾಡಿಗೆ ಹೊರಟುಹೋದನು.

Advertisement

(ಪ್ರೊ. ಎಲ್‌. ಎಸ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ)

Advertisement

Udayavani is now on Telegram. Click here to join our channel and stay updated with the latest news.

Next