ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸುವ ವಿಚಾರ ಜಿಲ್ಲಾ ರಾಜಕಾರಣದಲ್ಲಿ ಹೊಸ ತಲ್ಲಣಸೃಷ್ಟಿಸಿದೆ. ಸುಮಲತಾ ಚುನಾವಣೆ ಸ್ಪರ್ಧೆಗೆ ಒಲವು ತೋರಿದ ಬೆನ್ನಲ್ಲೇ ಅಂಬಿ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ವಾರ್‌ಶುರು ಮಾಡಿದ್ದಾರೆ. ತಾಕತ್ತಿದ್ದರೆ ನಿಮ್ಮ ನಾಯಕರ ಮಗ (ನಿಖೀಲ್)ನನ್ನು ಕರೆ ತಂದು ಅಭ್ಯರ್ಥಿ ಮಾಡಿ ಎಂದು ಅಂಬರೀಶ್ ಬೆಂಬಲಿಗರು ಸವಾಲು ಹಾಕಿದರೆ, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆ.ಚುನಾವಣೆಯಲ್ಲಿ ಗೆಲ್ಲಿಸಿ ತೋರಿಸ್ತೀವಿ ಅಂತ ಜೆಡಿಎಸ್‌ನವರು ಪ್ರತಿ ಸವಾಲು ಹಾಕಿದ್ದಾರೆ. ಅಂಬರೀಶ್ ಸಹಾಯದಿಂದಲೇ ಸಿ.ಎಸ್.ಪುಟ್ಟರಾಜು ಸಂಸದರಾದರು ಎಂದು ಮತ್ತೆ ಅಂಬಿ ಅಭಿಮಾನಿಗಳು ಚಾಟಿ ಬೀಸಿದರೆ, ಅಂಬರೀಶ್‌ಗೆ ಸಚಿವ ಸ್ಥಾನ ಹೋದಾಗ ನೀವೆಲ್ಲಾ ಎಲ್ಲಿಗೆ ಹೋಗಿದ್ದಿರಿ ಎಂದು ಜೆಡಿಎಸ್‌ನವರು ಕಾಲೆಳೆದಿದ್ದಾರೆ. ಸುಮಲತಾ ಸ್ಪರ್ಧೆ ಮಾಡುತ್ತಿರುವುದಕ್ಕೆ ಹೆದರಿರೋ ಜೆಡಿಎಸ್ ನಾಯಕರು, ಬೇರೆ ಯಾರಾದ್ರೂ ಶಿವರಾಮೇಗೌಡರ ಥರ ಕುರಿ ಸಿಕ್ತಾರಾ ಅಂತ ಹುಡುಕುತ್ತಿದ್ದಾರೆ ಎಂದು ಮತ್ತೆ ಅಂಬರೀಶ್ ಬೆಂಬಲಿಗರು ವ್ಯಂಗ್ಯವಾಡಿದರೆ, ನಮ್ಮ ವರಿಷ್ಠರು ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸದಿಂದ ಉತ್ತರಿಸಿದ್ದಾರೆ. ಅಲ್ಲದೆ, ಅಸಭ್ಯ ಮಾತುಗಳಿಂದ, ಅಂಬರೀಶ್ ಮಾದರಿಯ ಡೈಲಾಗ್‌ಗಳ ಮೂಲಕವೇ ಜೆಡಿಎಸ್‌ನವರನ್ನು ಅಂಬರೀಶ್ ಬೆಂಬಲಿಗರು ಕೆಣಕಿದ್ದರೆ, ಅಷ್ಟೇ ತೀಕ್ಷ್ಣವಾಗಿ ಜೆಡಿಎಸ್‌ನವರೂ ಉತ್ತರ ನೀಡಿದ್ದಾರೆ.
ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಜೆಡಿಎಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಸುಮಲತಾ ಅವರು ನಮ್ಮಸಂಬಂಧಿಕರೇ ಆಗಿರಬಹುದು. ಆದರೆ, ಸಂಬಂಧ ಅಥವಾ ಪಕ್ಷ ಎಂದು ಬಂದಾಗ ನನಗೆ ಪಕ್ಷವೇ ಮುಖ್ಯ.
● ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ.
ಮಾಜಿ ಪ್ರಧಾನಿ ದೇವೇಗೌಡ ಅಥವಾ ನಿಖೀಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲಿಂದ ಆಹ್ವಾನ ನೀಡಿದ್ದೇವೆ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಇವರಿಬ್ಬರಲ್ಲಿ ಯಾರೇ ಸ್ಪರ್ಧೆ ಮಾಡಿದರೂ ನಾವು ಅವರನ್ನು ಗೆಲ್ಲಿಸುವ ವಿಶ್ವಾಸದಲ್ಲಿದ್ದೇವೆ.
● ಪುಟ್ಟರಾಜು, ಸಚಿವ.