ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕರಾಗಿರುವ ಮುಕೇಶ್ ಅಂಬಾನಿ ಹಾಗೂ ಕುಟುಂಬ ಸದಸ್ಯರಿಗೆ ಭಾರತ ಹಾಗೂ ವಿದೇಶಗಳಲ್ಲಿಯೂ ಉನ್ನತ ಝಡ್ ಪ್ಲಸ್ ಭದ್ರತೆಯನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಆಸ್ಕರ್ ವೇದಿಕೆಯಲ್ಲಿ ʼನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕ್ತಾರ ಜೂ.ಎನ್ ಟಿಆರ್, ರಾಮ್‌ಚರಣ್?
ದೇಶ ಹಾಗೂ ವಿದೇಶಗಳಲ್ಲಿ ಉನ್ನತ ಝಡ್ ಪ್ಲಸ್ ಭದ್ರತೆಗೆ ತಗಲುವ ವೆಚ್ಚವನ್ನು ಮುಕೇಶ್ ಅಂಬಾನಿ ಭರಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ. ಅಂಬಾನಿ ಹಾಗೂ ಕುಟುಂಬ ಸದಸ್ಯರಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಮುರಾರಿ ಮತ್ತು ಜಸ್ಟೀಸ್ ಅಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠ ಈ ಆದೇಶವನ್ನು ನೀಡಿದೆ.
ಮುಂಬೈನಲ್ಲಿ ವಾಸವಾಗಿರುವ ಮುಕೇಶ್ ಅಂಬಾನಿ ಮತ್ತು ಕುಟುಂಬ ಸದಸ್ಯರಿಗೆ ಭದ್ರತೆ ನೀಡುವುದು ಮಹಾರಾಷ್ಟ್ರ ಸರ್ಕಾರ ಮತ್ತು ಗೃಹ ಸಚಿವಾಲಯದ ಹೊಣೆಯಾಗಿದ್ದು, ಇನ್ನುಳಿದಂತೆ ದೇಶಾದ್ಯಂತ ಹಾಗೂ ವಿದೇಶಗಳಿಗೆ ಪ್ರಯಾಣಿಸುವಾಗ ಝಡ್ ಪ್ಲಸ್ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
“ಒಂದು ವೇಳೆ ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ ಬೆದರಿಕೆ ಇದೆ ಎಂಬ ಅಭಿಪ್ರಾಯವನ್ನು ನಾವು ಪರಿಗಣಿಸುತ್ತೇವೆ. ಆ ನಿಟ್ಟಿನಲ್ಲಿ ಉನ್ನತ ಝಡ್ ಪ್ಲಸ್ ಭದ್ರತೆಯ ಖರ್ಚು-ವೆಚ್ಚವನ್ನು ಅಂಬಾನಿಯೇ ಭರಿಸಬೇಕು ಎಂದು ಅರ್ಜಿ ವಿಚಾರಣೆ ವೇಳೆ ಅಂಬಾನಿ ಪರ ವಕೀಲರಿಗೆ ಕೋರ್ಟ್ ತಿಳಿಸಿರುವುದಾಗಿ” ವರದಿ ಹೇಳಿದೆ.
ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ತ್ರಿಪುರಾದ ಅಗರ್ತಾಲಾ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ಮಾಹಿತಿ ಕೇಳಿತ್ತು. ಆದರೆ ತ್ರಿಪುರಾ ಹೈಕೋರ್ಟ್ ನಿರ್ದೇಶನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತು ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.