ಹೊಸದಿಲ್ಲಿ: ರಫೇಲ್ ಡೀಲ್ ವಿಚಾರದಲ್ಲಿ ನಾವು ಸುಳ್ಳು ಹೇಳುತ್ತಿಲ್ಲ. ಅನಿಲ್ ಅಂಬಾನಿ ಅವರ ರಿಲಯನ್ಸ್ ಆಯ್ಕೆ ನಮ್ಮದೇ ಎಂದು ಡೆಸಾಲ್ಟ್ ಏವಿಯೇಶನ್‌ನ ಸಿಇಓ ಎರಿಕ್ ಟ್ರಾಪಿಯರ್ ಸ್ಪಷ್ಟಪಡಿಸಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಇದೊಂದು “ಮುಕ್ತ ವ್ಯವಹಾರ’ ಎಂದು ಹೇಳಿದ್ದಾರೆ. ಈ ಡೀಲ್‌ನಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಎಂದೂ ಅವರು ಸಮರ್ಥಿಸಿದ್ದಾರೆ.
ರಫೇಲ್ ಡೀಲ್ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಎರಿಕ್, 1953ರಿಂದಲೂ ಭಾರತದ ಜತೆ ವ್ಯವಹಾರ ಮಾಡಿಕೊಂಡು ಬಂದಿದ್ದೇವೆ. ನೆಹರೂ ಇದ್ದಾಗ ನಮ್ಮ ವ್ಯವಹಾರ ಶುರುವಾಗಿತ್ತು. ಇದುವರೆಗೂ ನಾವು ಭಾರತದಲ್ಲಿನ ಯಾವುದೇ ಪಕ್ಷದ ಪರ ಕೆಲಸ ಮಾಡಿಲ್ಲ ಎಂದೂ ಅವರು ಹೇಳಿದ್ದಾರೆ.
ಅನಿಲ್ ಅಂಬಾನಿ ಅವರ ರಿಲಯನ್ಸ್ ಮಾತ್ರ ನಮ್ಮ ಆಫ್ಸೆಟ್ ಕಂಪೆನಿಯಲ್ಲ. ಇನ್ನೂ 30 ಕಂಪೆನಿಗಳಿವೆ. ರಿಲಯನ್ಸ್ ಶೇ.10 ರಷ್ಟು ವ್ಯವಹಾರ ಮಾಡುತ್ತಿದೆ. ಜತೆಗೆ, ರಿಲಯನ್ಸ್ ವಿಚಾರದಲ್ಲಿ ಭಾರತ ಸರಕಾರ ಯಾವುದೇ ಪ್ರಭಾವ ಬೀರಿರಲಿಲ್ಲ, ಇದು ಸಂಪೂರ್ಣವಾಗಿ ನಮ್ಮದೇ ಆಯ್ಕೆ ಎಂದೂ ಎರಿಕ್ ಪ್ರತಿಪಾದಿಸಿದ್ದಾರೆ.
“ನಾನು ಇದುವರೆಗೆ ಯಾವುದೇ ಸುಳ್ಳು ಹೇಳಿಲ್ಲ, ನಾನು ಇದುವರೆಗೆ ನೀಡಿರುವ ಹೇಳಿಕೆಗಳೆಲ್ಲವೂ ಸತ್ಯವೇ ಆಗಿವೆ. ನನ್ನ ಹುದ್ದೆಯಲ್ಲಿರುವ ಯಾರೂ ಸುಳ್ಳು ಹೇಳಲು ಸಾಧ್ಯವೂ ಇಲ’É ಎಂದು ಎರಿಕ್ ತಿಳಿಸಿದ್ದಾರೆ. ರಿಲಯನ್ಸ್ ಕಂಪೆನಿಗೆ 284 ಕೋಟಿ ರೂ. ಕಿಕ್‌ಬ್ಯಾಕ್ ನೀಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಕೇಳಿ ನೋವಾಗಿದೆ. ನಾವು ಹಿಂದಿನಿಂದಲೂ ಕಾಂಗ್ರೆಸ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. 1953ರಲ್ಲಿ ನೆಹರು ಕಾಲದಲ್ಲಿ ನಮ್ಮ ವ್ಯವಹಾರ ಶುರು ವಾಗಿತ್ತು. ಇದಾದ ಅನಂತರ ಹಲವಾರು ಪ್ರಧಾನಿಗಳು ಬಂದರು. ಎಲ್ಲರ ಕಾಲದಲ್ಲೂ ಕೆಲಸ ಮಾಡಿದ್ದೇವೆ. ಯಾರ ಪರವಾಗಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಅವಧಿಗಿಂತ ದರ ಕಡಿಮೆ: ರಫೇಲ್ ಡೀಲ್ ವಿಚಾರದಲ್ಲಿ ಹಿಂದಿನ 36 ಮತ್ತು ಈಗಿನ 18 ಯುದ್ಧ ವಿಮಾನಗಳ ದರ ಒಂದೇ ಆಗಿವೆ. ಜತೆಗೆ ಹಿಂದಿನ ಅವಧಿ ಗಿಂತಲೂ ಶೇ.9 ರಷ್ಟು ದರ ಕಡಿಮೆಯಾ ಗಿದೆ. ಇದಕ್ಕೆ ಕಾರಣ ಹಿಂದಿನ ಸರಕಾರ ಮತ್ತು ಹಾಲಿ ಸರಕಾರಗಳು ನಡೆಸುವ ಸಮಾಲೋ ಚನೆಗಳು ಎಂದು ಎರಿಕ್ ಹೇಳಿ ದ್ದಾರೆ.
ಜತೆಗೆ ನಾವು ರಿಲಯನ್ಸ್‌ನಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಆದರೆ, ಈ ಕಂಪೆನಿ ನಮ್ಮ ಜಂಟಿ ಸಹಭಾಗಿತ್ವದ್ದಾಗಿರುವುದರಿಂದ ಶೇ. 51- ಶೇ.49ರ ಆಧಾರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದಿದ್ದಾರೆ.
ಸುಳ್ಳು ಸಂದರ್ಶನ: ಎರಿಕ್ ಸಂದರ್ಶನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದೊಂದು ಸಂಪೂರ್ಣ ಸೃಷ್ಟಿಸಲಾಗಿರುವ ಸುಳ್ಳುಗಳು ಎಂದು ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣೆ ಮಾಡುವ ಸಲುವಾಗಿ ಸಿಇಓ ಬಳಿ ಸುಳ್ಳು ಹೇಳಿಸಲಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುಜೇìವಾಲ ಆರೋಪಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಎರಿಕ್ ಕೂಡ ಆರೋಪಿಯಾಗಿರುವುದರಿಂದ ಅವರ ಮಾತನ್ನು ನಂಬಲು ಸಾಧ್ಯವಿಲ್ಲ.
ಅನಿಲ್ ಅಂಬಾನಿ ರಕ್ಷಣೆಗಾಗಿಯೇ ಈ ಡೀಲ್ ಮಾಡಿಕೊಳ್ಳಲಾಗಿದೆ ಎಂದು ಮತ್ತೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ವರ್ತನೆಗಳು ದಿನದಿಂದ ದಿನಕ್ಕೆ ಹೆಚ್ಚು ಬೇಜವಾಬ್ದಾರಿಯಿಂದ ಕೂಡಿದವುಗಳಾಗಿವೆ. ಭಾರತದ ಭದ್ರತೆಗೆ ಬೇಕಾದ ಅಗತ್ಯಗಳನ್ನು ಮರೆತವರಂತೆ ಅವರು ಮಾತನಾಡುತ್ತಿದ್ದಾರೆ. ರಾಹುಲ್ ಮತ್ತು ಪಾಕಿಸ್ತಾನದ ಮಾತುಗಳು ಒಂದೇ ಆಗಿವೆ.
– ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ