ನಟ ದರ್ಶನ್ ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯಲು ಅವಕಾಶ ನಿರಾಕರಿಸುತ್ತಿರುವ ಹಿಂದೆ ಅಂಬಾನಿಯ ಕೈವಾಡ ಇರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಹೌದು, ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ ಈ ಬಗ್ಗೆಯೂ ಮಾತನಾಡಿದ ದರ್ಶನ್, “ಸ್ಕೂಲ್ ಓಪನ್ ಆಯ್ತು. ಕಾಲೇಜ್ ಓಪನ್ ಆಯ್ತು. ಮದುವೆಗಳು ನಡೆಯುತ್ತಿವೆ. ಮಾರ್ಕೇಟ್‌ನಲ್ಲಿ ಸಾವಿರಾರು ಜನ ಇದ್ದಾರೆ. ಆದರೆ, ಇದ್ಯಾವುದಕ್ಕೂ ಇಲ್ಲದ ನಿಯಮ ಥಿಯೇಟರ್‌ಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ, “ಇದಕ್ಕೆಲ್ಲ 5ಜಿ ಕಾರಣ. ಉದ್ಯಮಿ ಅಂಬಾನಿ 5ಜಿ ನೆಟ್‌ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎಂದು ನನಗೆ ಅನಿಸುತ್ತಿದೆ. ಇದು ನನ್ನ ಅಭಿಪ್ರಾಯ. 5ಜಿ ಓಡಬೇಕು ಎಂದರೆ ಓಟಿಟಿ ಸಿನಿಮಾಗಳು, ಆನ್‌ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದುಬಿಟ್ಟರೆ ಓಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಅದಕ್ಕೋಸ್ಕರ ಪಾಪ, ದೊಡ್ಡ ದೊಡ್ಡವರಿಗೆ ಹೇಳಿ ಹೀಗೆ ಮಾಡಿಸಿರಬಹುದು. ಯಾವುದೇ ಕಾರಣಕ್ಕೂ ನಾವು ಓಟಿಟಿಗೆ ಮಾತ್ರ ಸಿನಿಮಾ ಕೊಡಲ್ಲ. ಶೇ.50 ಅಲ್ಲ, ಶೇ25ರಷ್ಟು ಕೊಟ್ಟರೂ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡ್ತೀವಿ. ಖಂಡಿತಾ ಮಾರ್ಚ್ 11ರಂದು ‘ರಾಬರ್ಟ್’ ಜೊತೆಗೆ ಬರ್ತಿವಿ’ ಎಂದು ಹೇಳಿದ್ದಾರೆ.
ರಾಬರ್ಟ್ ರಿಲೀಸ್ ಬಗ್ಗೆ ಬಿಚ್ಚಿಟ್ಟ ಮಾಹಿತಿ
ಇನ್ನು ದರ್ಶನ್ ಫೇಸ್‌ಬುಕ್ ಲೈವ್ ಬರುತ್ತಿದ್ದಂತೆ, ಅನೇಕ ಅಭಿಮಾನಿಗಳು “ರಾಬರ್ಟ್ ರಿಲೀಸ್ ಯಾವಾಗ?’ ಎಂಬ ಪ್ರಶ್ನೆಯನ್ನು ಕಾಮೆಂಟ್ಸ್‌ನಲ್ಲಿ ಕೇಳುತ್ತಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್, “ಮಾರ್ಚ್ ತಿಂಗಳಲ್ಲಿ “ರಾಬರ್ಟ್’ ಸಿನಿಮಾ ರಿಲೀಸ್ ಪಕ್ಕಾ ಆಗಲಿದೆ. ವಿಶೇಷವಾಗಿ ಮಾರ್ಚ್ 11 ರಂದೇ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಬಯಕೆ. ಎಲ್ಲಾ ಸರಿಹೋದರೆ ಮಾರ್ಚ್ 11 ರಂದು “ರಾಬರ್ಟ್’ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಈಗ ರಿಲೀಸ್ ಡೇಟ್ ಫಿಕ್ಸ್ ಆಗಿರುವುದರಿಂದ ಹಂತ ಹಂತವಾಗಿ ಪ್ರಮೋಷನ್ ಆರಂಭಿಸುತ್ತೇವೆ’ ಎಂದಿದ್ದಾರೆ. ಇನ್ನು “ರಾಬರ್ಟ್’ ಚಿತ್ರದ ತೆಲುಗು ಆವೃತ್ತಿ ಬಗ್ಗೆ ಮಾತನಾಡಿದ ದರ್ಶನ್, “ಈಗ “ರಾಬರ್ಟ್ ಸಿನಿಮಾದ ತೆಲುಗು ವರ್ಶನ್ ಡಬ್ಬಿಂಗ್ ಕೆಲಸ ಮುಗಿಯುತ್ತಾ ಬಂದಿದೆ. ಜನವರಿ 26ಕ್ಕೆ ಏನಾದರೊಂದು ಸ್ಪೆಷಲ್ ನೀಡೋಣ ಎಂದುಕೊಂಡಿದ್ದೇವೆ. ಅಲ್ಲಿಂದ ತೆಲುಗು ಪ್ರಮೋಷನ್ ಕೂಡ ಆರಂಭವಾಗಲಿದೆ’ ಎಂದರು.
ದರ್ಶನ್ ಫೇಸ್‌ಬುಕ್ ಲೈವ್ ಹಿಂದೆಯೇ ಚಿತ್ರತಂಡ ಕೂಡ “ರಾಬರ್ಟ್’ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಮಾರ್ಚ್ 11ರ ಗುರುವಾರದಂದು ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ “ರಾಬರ್ಟ್’ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಸೋಶಿಯಲ್ ಮೀಡಿಯಾಗಳ ಮೂಲಕ ಮಾಹಿತಿ ಹಂಚಿಕೊಂಡಿದೆ.