Advertisement

A Loan Story; ಅಂಬಾನಿಗೂ ಮಣಿಪಾಲಕ್ಕೂ ಉಂಟು ಹಳೇಯ ನಂಟು; ಇದು 2 ಲಕ್ಷ ರೂ ಗುಟ್ಟು

06:47 PM Jul 19, 2024 | Team Udayavani |

ದೇಶದ ಬ್ಯುಸಿನೆಸ್ ದಿಗ್ಗಜ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವೈಭವದ ವಿವಾಹ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ವಿಶ್ವದ ಹಲವು ಕ್ಷೇತ್ರಗಳ ದಿಗ್ಗಜರು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಧುನಿಕ ಭಾರತದ ಅತ್ಯಂತ ದುಬಾರಿ ಮದುವೆ ವಿಶ್ವದ ಗಮನ ಸೆಳೆದಿತ್ತು. ಭಾರತದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಬಾನಿ ಕುಟುಂಬದ ಏಳಿಗೆಯ ಹಿಂದೆ ಉಡುಪಿಯ ಮಣಿಪಾಲದ ಪಾತ್ರದ ಬಗ್ಗೆ ಹಲವರಿಗೆ ತಿಳಿದಿಲ್ಲ. ಅಲ್ಲದೆ ನವವಿವಾಹಿತ ಅನಂತ್ ಅಂಬಾನಿ ಹೆಸರಿನ ಹಿಂದೆಯೂ ವಿಶೇಷ ಪ್ರಸಂಗವೊಂದಿದೆ.

Advertisement

ಅದು 1968, ಟೆಕ್ಸ್ ಟೈಲ್ ಮಿಲ್ ನಡೆಸುತ್ತಿದ್ದ ಧೀರೂಭಾಯ್ ಅಂಬಾನಿಗೆ ಅದನ್ನು ಮೀರಿ ಬಳೆಯುವ ಹಂಬಲವಿತ್ತು. ಅದಕ್ಕೆ ಬೇಕಾಗಿದ್ದಿದ್ದು ಎರಡು ಲಕ್ಷ ರೂ ಸಾಲ. ಆದರೆ ಜಾಮೀನುದಾರರ ಕೊರತೆಯಿಂದಾಗಿ ಅವರ ಲೋನ್ ಅರ್ಜಿಯನ್ನು ಬ್ಯಾಂಕ್ ಗಳು ತಿರಸ್ಕರಿಸಿದ್ದವು. ಈ ವೇಳೆ ಧೀರೂಭಾಯ್ ಅಂಬಾನಿ ಅವರು ಬಂದಿದ್ದು ಮಣಿಪಾಲದ ಡಾ.ಟಿ.ಎ ಪೈ ಬಳಿಗೆ. ಯಶಸ್ವಿ ಬ್ಯಾಂಕರ್ ಆಗಿದ್ದ ಟಿಎ ಪೈ ಅವರು ಯಾವುದೇ ಗ್ಯಾರಂಟಿ ಕೇಳದೆ ತನ್ನ ಸಿಂಡಿಕೇಟ್ ಬ್ಯಾಂಕ್ ನಿಂದ ಎರಡು ಲಕ್ಷ ರೂ ನೀಡಿದ್ದರು. ಉಳಿದದ್ದು ಇತಿಹಾಸ.

”ಉದ್ಯಮಶೀಲತೆಯ ಉತ್ಸಾಹವನ್ನು ಗುರುತಿಸಬೇಕು. ನಾವು ಬ್ಯಾಂಕರ್ ಆಗಿ ಸಾಲ ನೀಡಬೇಕೇ ಹೊರತು ಲೇವಾದೇವಿದಾರರಾಗಿ ಅಲ್ಲ” ಎಂದು ಡಾ.ಪೈ ಅಂದು ಹೇಳಿದ್ದರು. ಈ ವಿಚಾರವನ್ನು ಡಾ.ಪೈ ಅವರ ಅಂತ್ಯಕ್ರಿಯೆಗೆ ಆಗಮಿಸಿದ್ದ ಸ್ವತಃ ಅಂಬಾನಿಯೇ ಆರ್‌ಬಿಐನ ಹಿರಿಯ ಅಧಿಕಾರಿಗಳಿಗೆ ವಿವರಿಸಿದ್ದರು.

ಪೈ ಅವರು ನೀಡಿದ ಸಾಲದ ಸಹಾಯದಿಂದ ಮತ್ತು ತನ್ನ ಕಠಿಣ ಶ್ರಮದಿಂದ ಟೆಕ್ಸ್ ಟೈಲ್ ಉದ್ಯಮದಿಂದ ಇಂದು ದೇಶದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ರಿಲಯನ್ಸ್ ವರೆಗೆ ಅಂಬಾನಿ ಬೆಳೆದರು.

Advertisement

ಸಿಂಡಿಕೇಟ್ ಬ್ಯಾಂಕನ್ನು ಭಾರತ ಸರ್ಕಾರವು ರಾಷ್ಟ್ರೀಕರಣಗೊಳಿಸಿದಾಗ, ಡಾ.ಟಿ.ಎ ಪೈ ಅವರು ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷರಾದರು. ನಂತರ, ಅವರು ಬೆಂಗಳೂರಿನ IIM ನ ಮೊದಲ ಅಧ್ಯಕ್ಷರಾದರು.

ಕಷ್ಟಕಾಲದಲ್ಲಿ ಡಾ.ಟಿ.ಎ.ಪೈ ಅವರು ಮಾಡಿದ ಸಹಾಯವನ್ನು ಅಂಬಾನಿ ಮರೆಯಲಿಲ್ಲ. ತನ್ನ ಪುತ್ರ ಮುಕೇಶ್ ಅಂಬಾನಿಯ ಕಿರಿಯ ಪುತ್ರನಿಗೆ ಮಣಿಪಾಲದ ಬ್ಯಾಂಕರ್ ನ ಹೆಸರನ್ನೇ ಇಟ್ಟರು. ಡಾ. ತೋನ್ಸೆ ಅನಂತ್ ಪೈ (ಡಾ.ಟಿ.ಎ ಪೈ) ಅವರು ಪ್ರೇರಣೆಯಿಂದ ಅಂಬಾನಿ ಮೊಮ್ಮಗನಿಗೆ ಅನಂತ್ ಎಂದು ಹೆಸರಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next