Advertisement

ಪೊಲೀಸ್‌ ಪ್ರಸ್ತಾವನೆ, ತಾಂತ್ರಿಕ ತಜ್ಞರ ವರದಿ ಕಡತಕ್ಕೆ  ಸೀಮಿತವೇ?

06:40 AM Apr 09, 2018 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಜಿಲ್ಲೆಯ ಅಪಾಯಕಾರಿ ಜಂಕ್ಷನ್‌ಗಳ ಬಗ್ಗೆ ಮಣಿಪಾಲದ ಖಾಸಗಿ ಎಂಜಿನಿಯರಿಂಗ್‌ ಸಂಸ್ಥೆಯ ತಜ್ಞರ ಮೂಲ ಸಿದ್ಧಪಡಿಸಿದ ವರದಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರದಿ ಕಡತಕ್ಕೆ ಮಾತ್ರ ಸೀಮಿತವಾಗುವುದೇ? ಎನ್ನುವ ಜಿಜ್ಞಾಸೆ ಹುಟ್ಟಿಕೊಂಡಿದೆ.

Advertisement

ಹೆದ್ದಾರಿ ಪ್ರಾಧಿಕಾರ ಮೂಲಕ ಖಾಸಗಿ ಸಂಸ್ಥೆ ಗುತ್ತಿಗೆ ವಹಿಸಿ ಕಾಮಗಾರಿ ನಡೆಸುತ್ತಿದೆ. ಜಂಕ್ಷನ್‌ಗಳಲ್ಲಿ ನಡೆದ ಕಾಮಗಾರಿಗಳು ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಂಟಕವಾಗಿದೆ ಎನ್ನುವುದನ್ನು 24 ಪುಟಗಳ ವರದಿಯಲ್ಲಿ ಹೇಳಲಾಗಿದೆ. ಈ ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿ ಜಂಕ್ಷನ್‌ಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಬೇಕು ಎನ್ನುವುದು ಪೊಲೀಸ್‌ ಇಲಾಖೆಯ ಇರಾದೆ.
 
ಹೆಚ್ಚಿದ ವಾಹನದೊತ್ತಡ
ಸಂತೆಕಟ್ಟೆ, ಅಂಬಲಪಾಡಿ, ಕಟಪಾಡಿ, ಉದ್ಯಾವರ ಈ ನಾಲ್ಕು ಜಂಕ್ಷನ್‌ಗಳಲ್ಲಿ ಹೆಚ್ಚಿನ ವಾಹನಗಳು ಒಳ ರಸ್ತೆಗಳಿಂದ ಬಂದು ರಾ.ಹೆ.ಯನ್ನು ಸಂಪರ್ಕಿಸುತ್ತವೆ. ಇಲ್ಲಿ ವಾಹನ ದಟ್ಟಣೆ ಬಹಳ ಹೆಚ್ಚಿದೆ. ದಿನವಿಡೀ ಪೊಲೀಸರು ಜಂಕ್ಷನ್‌ಗಳಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯವಿದೆ.  ಒಂದು ವೇಳೆ ಇಲ್ಲಿ ಪೊಲೀಸರು ಇಲ್ಲದಿದ್ದರೆ ಟ್ರಾಫಿಕ್‌ ಜಾಂ ಉಂಟಾಗುತ್ತದೆ.

ಸರ್ವಿಸ್‌ ರಸ್ತೆ ಸದುಪಯೋಗವಾಗಲಿ
ಪ್ರಮುಖ ಜಂಕ್ಷನ್‌ಗಳಲ್ಲಿ ಸರ್ವಿಸ್‌ ರಸ್ತೆಗಳನ್ನು ಮಾಡಲಾಗಿದೆ. ಆದರೆ ಈ ರಸ್ತೆಗಳು ಸೂಕ್ತ ಉದ್ದೇಶಕ್ಕೆ ಬಳಕೆಯೇ ಆಗುತ್ತಿಲ್ಲ. ರಸ್ತೆಯಲ್ಲಿ  ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದೆ. ಆಟೋ, ಟ್ಯಾಕ್ಸಿ ನಿಲ್ದಾಣವಾಗಿ, ಅಂಗಡಿ ಮಾಲಕರು, ಗ್ರಾಹಕರ ವಾಹನಗಳ ಪಾರ್ಕಿಂಗ್‌  ತೆಕ್ಕಟ್ಟೆ, ಸಾಲಿಗ್ರಾಮ, ಉದ್ಯಾವರ, ಪಾಂಗಾಳದಲ್ಲಿ ಒಳರಸ್ತೆಗಳು ನೇರವಾಗಿ ಹೆದ್ದಾರಿಯನ್ನು ಸಂಪರ್ಕಿಸುತ್ತವೆ. ಆದರೆ ಇಲ್ಲಿ ಸರ್ವಿಸ್‌ ರಸ್ತೆಗಳೇ ಆಗಿಲ್ಲ. ಇಲ್ಲಿಯೂ ಸರ್ವೀಸ್‌ ರಸ್ತೆ ಮಾಡಬೇಕು ಎನ್ನುವ ಅಂಶ ವರದಿಯಲ್ಲಿದೆ.

ವರದಿಯ ಅನ್ವಯ ಹೀಗೆ ಮಾಡಬೇಕು
–  ಬಸ್‌ ನಿಲುಗಡೆಗೆ ಬಸ್‌ ಬೇ ನಿರ್ಮಿಸಬೇಕು.
– ಜಂಕ್ಷನ್‌ಗೆ ಸಮೀಪವಿರುವ ಬಸ್‌ ನಿಲ್ದಾಣಗಳನ್ನು 100 ಮೀ. ದೂರಕ್ಕೆ ಸ್ಥಳಾಂತರಿಸಬೇಕು.
–  ಜೀಬ್ರಾ ಕ್ರಾಸ್‌ ಮತ್ತು ದೊಡ್ಡದಾದ ಸೂಚನಾ ಫ‌ಲಕ ಅತ್ಯಗತ್ಯ.
–  ಜಂಕ್ಷನ್‌ ಇರುವಲ್ಲಿ ಸರ್ವಿಸ್‌ ರಸ್ತೆಗಳು ಅಗತ್ಯವಾಗಿ ಆಗಬೇಕು.
–  ನಿರ್ಮಾಣವಾಗಿರುವ ಸರ್ವೀಸ್‌ ರಸ್ತೆಗಳಲ್ಲಿ ವಾಹನ ಪಾರ್ಕ್‌ ತೆರವು ಮಾಡಬೇಕು.
–  ಜಂಕ್ಷನ್‌ ರಸ್ತೆಯಲ್ಲಿ ರಾತ್ರಿ ವೇಳೆ ಹೆಚ್ಚು ಬೆಳಕಿನ ವ್ಯವಸ್ಥೆ ಮಾಡಬೇಕು.

ಡೇಂಜರಸ್‌ ಜಂಕ್ಷನ್‌ಗಳು
ಪಡುಬಿದ್ರಿ, ಕಾಪು, ಇನ್ನಂಜೆ (ಪಾಂಗಾಳ), ಕಟಪಾಡಿ, ಉದ್ಯಾವರ, ಅಂಬಲಪಾಡಿ, ಉಡುಪಿ ಕರಾವಳಿ, ಬಾಳಿಗಾ ಫಿಶ್‌ನೆಟ್‌ ಕ್ರಾಸ್‌, ಆಶೀರ್ವಾದ್‌, ಸಂತೆ ಕಟ್ಟೆ, ಮಹೇಶ್‌ ಆಸ್ಪತ್ರೆ ಕ್ರಾಸ್‌, ಬ್ರಹ್ಮಾವರ ಆಕಾಶವಾಣಿ, ಸಾಲಿ ಗ್ರಾಮ-ಗುಂಡ್ಮಿ, ಗುರು ನರಸಿಂಹ ಟೆಂಪಲ್‌, ತೆಕ್ಕಟ್ಟೆ, ಜಂಕ್ಷನ್‌ಗಳು ಅಪಾಯಕಾರಿಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

3 ವರ್ಷ- 402 ಸಾವು
ರಾ.ಹೆ. 66ರಲ್ಲಿ  ಹೆಜಮಾಡಿ ಯಿಂದ ತೆಕ್ಕಟ್ಟೆ ವರೆಗೆ 2015-17 ಅವಧಿಯಲ್ಲಿ  1,630 ಅಪಘಾತಗಳು ಸಂಭವಿಸಿವೆ. ಇದರಲ್ಲಿ  402 ಮಂದಿ ಮೃತಪಟ್ಟರೆ, 368 ಮಂದಿ ಗಂಭೀರ ಗಾಯ ಗೊಂಡವರೂ ಸೇರಿ 1,803 ಮಂದಿ ಗಾಯಗೊಂಡಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಸ್ಕೈವಾಕರ್‌ ಪ್ರಸ್ತಾವನೆಯೂ ನನೆಗುದಿಗೆ?
ರಾ.ಹೆ. 66ರ ಹೆಜಮಾಡಿಯಿಂದ ಬೈಂದೂರಿನವರೆಗಿನ ವರದಿ ತಯಾರಿಸಿ ಒಟ್ಟು 24 ಕಡೆಗಳಲ್ಲಿ ಪಾದಚಾರಿ ಮೇಲ್ಸೇತುವೆ (ಸ್ಕೈವಾಕರ್‌) ನಿರ್ಮಾಣ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಹಿಂದಿನ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌ ಅವರು ಕಳೆದ ಅಕ್ಟೋಬರ್‌ನಲ್ಲಿಯೇ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಿದ್ದರು. ಆದರೆ ಆ ವರದಿ ಕೂಡ ಕಡತದಲ್ಲಿದೆ. ಜಾರಿಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಫಾಲೋಅಪ್‌ ಮಾಡ್ತೇವೆ
ರಸ್ತೆ ಸುರಕ್ಷೆ ಸಂಬಂಧ ಖಾಸಗಿ ಸಂಸ್ಥೆ ನೀಡಿದ ವರದಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ.  ಸದ್ಯ ಚುನಾವಣೆ ಒತ್ತಡಗಳಿವೆ. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿಕೊಂಡು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ಫಾಲೋ ಅಪ್‌ ಮಾಡಲಾಗುವುದು.
-ಲಕ್ಷ್ಮಣ ಬ. ನಿಂಬರಗಿ,  
ಉಡುಪಿ ಎಸ್‌ಪಿ

ಚಿತ್ರ: ಆಸ್ಟ್ರೋ ಮೋಹನ್‌

– ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next