ಮಲ್ಪೆ: ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿ ಸಮೀಪದಲ್ಲಿದ್ದ ಒಣಗಿದ ಅಶ್ವತ್ಥ ಮರದ ಬೃಹತ್ ಕಾಂಡದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಮಲ್ಪೆ ಅಗ್ನಿಶಾಮಕ ದಳದವರು ಸಂಪೂರ್ಣ ನಂದಿಸಿದರೂ ಮೂರು ದಿನಗಳವರೆಗೆ ಮತ್ತೆ ಮತ್ತೆ ಕಾಣಿಸಿಕೊಂಡಿದೆ.
ಮೇ 12ರ ತಡರಾತ್ರಿ ಅಶ್ವತ್ಥ ಮರದಲ್ಲಿ ಬೆಂಕಿ ಕಾಣಿಸಿಕೊಂಡಿತು. ತತ್‌ಕ್ಷಣ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದರು.
ಮಾರನೇ ದಿನ ಮಧ್ಯಾಹ್ನ ಮತ್ತೆ ಮರದಲ್ಲಿ ಹೊಗೆಯಾಡಿ ಬೆಂಕಿ ಹಿಡಿಯಿತು. ಆಗ್ನಿ ಶಾಮಕ ದಳವನ್ನು ಕರೆಸಿ ಹತ್ತಿದ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು.
ಅದರ ಮಾರನೇ ದಿನ ಮತ್ತೆ ಹೊಗೆಯಾಡುತ್ತಿರುವುದು ಕಾಣಿಸಿತು. ಸ್ಥಳೀಯರು ಟ್ಯಾಂಕರ್ ಮೂಲಕ ನೀರು ಸುರಿದು ಬೆಂಕಿಯನ್ನು ಆರಿಸಿದರು. ಕೊನೆಗೆ ನಾಲ್ಕನೇ ದಿನ ಒಳಗಿನಿಂಲೇ ಉರಿದು ಬೂದಿಯಿತು. ಮೂರ್‍ನಾಲ್ಕು ದಿನಗಳವರೆಗೆ ಬೆಂಕಿಯಾಡಿದ್ದರಿಂದ ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿತು ಎನ್ನುತ್ತಾರೆ ಸ್ಥಳೀಯರಾದ ಸುರೇಶ್ ಕಿದಿಯೂರು.
ಸುಮಾರು 200 ವರ್ಷಗಳ ಹಳೆಯದಾದ ಮರವನ್ನು ಬೀಳುವ ಸ್ಥಿತಿಯಲ್ಲಿದ್ದರಿಂದ ಒಂದು ವರ್ಷದ ಹಿಂದೆ ಕೊಂಬೆ ಕಡಿಯಲಾಗಿತ್ತು. ಅದರ ಬುಡಭಾಗವನ್ನು ಹಾಗೆ ಬಿಡಲಾಗಿತ್ತು.