ಉಡುಪಿ: ಹಲವಾರು ತಿಂಗಳಿಂದ ವಾಹನ ಸವಾರ ರಿಗೆ ಸವಾಲಿನ ರಸ್ತೆಯಾಗಿ ಪರಿಣಮಿಸಿರುವ ಅಂಬಾಗಿಲು- ಕಲ್ಸಂಕ ರಸ್ತೆ ಅಭಿವೃದ್ಧಿ ಯೋಜನೆಗೆ ಕಾಲ ಕೂಡಿ ಬಂದಿದೆ.
ಪ್ರಸ್ತುತ ಹದಗೆಟ್ಟ ರಸ್ತೆಯಲ್ಲಿ ಸವಾರರ ಸಂಕಷ್ಟ ಹೇಳತೀರದು. 1.90 ಕೋ. ರೂ. ಮತ್ತು 1.04 ಕೋ. ರೂ. ವೆಚ್ಚದಲ್ಲಿ ಅಂಬಾಗಿಲು-ತಾಂಗದಗಡಿ-ಗುಂಡಿಬೈಲು-ಕಲ್ಸಂಕ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಮಳೆ ಸಂಪೂರ್ಣ ಬಿಟ್ಟ ಕೂಡಲೇ ಕಾಮಗಾರಿ ಶುರು ಮಾಡುವ ಬಗ್ಗೆ ನಗರಸಭೆ ಆಡಳಿತ ಭರವಸೆ ನೀಡಿತ್ತು. ಮೊದಲ ಹಂತದಲ್ಲಿ ಅಂಬಾಗಿಲಿನಿಂದ ನಿಟ್ಟೂರು ಶಾಲೆ ಸಮೀಪ ತಾಂಗದಗಡಿವರೆಗೆ 1.90 ಕೋ. ರೂ. ವೆಚ್ಚದಲ್ಲಿ ಎರಡು ಬದಿಯಲ್ಲಿ ಡಾಮರಿನಿಂದ ವ್ಯವಸ್ಥಿತ ರಸ್ತೆ ನಿರ್ಮಿಸುವುದು. ಇಲ್ಲಿಂದ ಮುಂದುವರಿದು, ಗುಂಡಿಬೈಲು-ಕಲ್ಸಂಕ ವೃತ್ತದ ವರೆಗೆ 1.04 ಕೋ.ರೂ. ವೆಚ್ಚದಲ್ಲಿ ಡಾಮರು ಹಾಕುವ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ತಿಂಗಳಾಂತ್ಯಕ್ಕೆ ಕಾಮಗಾರಿ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಾಗಿಲು-ಕಲ್ಸಂಕ ರಸ್ತೆಯು ಚತುಷ್ಪಥಗೊಂಡು ಸವಾರರಿಗೆ ಅನುಕೂಲಕರವಾಗಿತ್ತು. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ರಸ್ತೆ ಎರಡು ಬದಿ ಅಲ್ಲಲ್ಲಿ ಹದಗೆಟ್ಟಿದೆ. ವಿವಿಧ ಕೇಬಲ್, ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆ ಪರಿಸ್ಥಿತಿ ಸಾಕಷ್ಟು ದುಸ್ಥಿತಿಗೆ ತಲುಪಿದೆ. ರಸ್ತೆ ಅವ್ಯವಸ್ಥೆಯಿಂದ ಈ ಭಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದ್ದವು. ರಸ್ತೆ ಮೇಲ್ಭಾಗದ ಪದರಗಳು ಎದ್ದು ಅಲ್ಲಲ್ಲಿ ಹರಡಿಕೊಂಡ ಪುಡಿಯಾದ ಕಲ್ಲು ತುಂಡುಗಳು ಸುಗಮ ಸಂಚಾರಕ್ಕೆ ಕಿರಿಕಿರಿಯಾಗುತ್ತಿವೆ. ಅಂಬಾಗಿಲು- ಗುಂಡಿಬೈಲು- ಕಲ್ಸಂಕ ರಸ್ತೆಯಲ್ಲಿ ಗುಂಡಿಗಳೇ ರಾರಾಜಿಸುತ್ತಿತ್ತು. ಈ ವರ್ಷದ ಮಳೆಗಾಲದಲ್ಲಿ ಸಾರ್ವಜನಿಕರು ಸಾಕಷ್ಟು ಕಷ್ಟಪಡುವಂತಾಗಿತ್ತು. ಮಳೆಗಾಲದಲ್ಲಿ ಗುಂಡಿಗಳಿಂದಲೇ ನಿಯಂತ್ರಣ ತಪ್ಪಿ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಸವಾರರು ಮೈಕೈಗೆ ಪೆಟ್ಟು ಮಾಡಿಕೊಂಡಿದ್ದರು. ಇತ್ತೀಚೆಗೆ ಗುಂಡಿಗಳಿಗೆ ತೇಪೆ ಹಚ್ಚಲಾಗಿದ್ದು, ಮುಂದಿನ ಮಳೆಗಾಲದ ಒಳಗೆ ವ್ಯವಸ್ಥಿತವಾಗಿ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ಪೂರ್ಣ
ಅಂಬಾಗಿಲಿನಿಂದ ಕಲ್ಸಂಕವರೆಗೆ ಎರಡು ಹಂತಗಳಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ.
-ಸುಮಿತ್ರಾ ನಾಯಕ್, ಅಧ್ಯಕ್ಷರು, ನಗರಸಭೆ