ನವದೆಹಲಿ : ಇ-ಕಾಮರ್ಸ್ ನಲ್ಲಿ ಬಹುದೊಡ್ಡ ಹೆಸರು ಮಾಡಿರುವ ಅಮೇಜಾನ್ ತನ್ನ ಮೊಬೈಲ್ ಆಪ್ ಲೋಗೋವನ್ನು ಬದಲಾಯಿಸಿದೆ. ಹಲವರಿಂದ ಈ ಲೋಗೋ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಇದರಿಂದ ಅಮೇಜಾನ್ ಈ ಬದಲಾವಣೆಗೆ ಮುಂದಾಗಿದೆ.
ಹಲವಾರು ಟೀಕಾಕಾರರು ಅಮೇಜಾನ್ ನಲ್ಲಿ ಈ ಹಿಂದೆ ಇದ್ದ ಲೋಗೋ ಬಗ್ಗೆ ಟೀಕೆ ಮಾಡಿದ್ದರು. ಈ ಲೋಗೋ ಹಿಟ್ಲರ್ ಮೀಸೆಯನ್ನು ಹೋಲುತ್ತದೆ ಎಂದು ಹೇಳಲಾಗಿದ್ದು, ಹಳೆಯ ಲೋಗೋಕ್ಕೆ ಕೊಂಚ ಮಾರ್ಪಾಡುಗಳನ್ನು ತಂದಿದ್ದು, ಹೊಸ ಲೋಗೋವನ್ನು ಹೊರ ತರಲಾಗಿದೆ.
ಅಮೇಜಾನ್ ಬರೋಬ್ಬರಿ ಐದು ವರ್ಷಗಳ ನಂತ್ರ ತನ್ನ ಲೋಗೋದಲ್ಲಿ ಬದಲಾವಣೆಯನ್ನು ತಂದಿದೆ. ಈಗ ಹೊರ ತಂದಿರುವ ಲೋಗೋ ಹಳೆಯ ಲೋಗೋವನ್ನೇ ಹೋಲುತ್ತಿದ್ದು, ಮೊದಲು ನೀಲಿ ಬಣ್ಣದ ಅಂಕು ಡೊಂಕಿನ ಗೆರೆಯುಳ್ಳ ಪಟ್ಟಿಯನ್ನು ತೆಗೆದು, ಮೂಲೆ ಮಡಚಿದ ಫೈಲ್ ಆಕಾರದ ಬಾಕ್ಸ್ ಅನ್ನು ಲೋಗೋದಲ್ಲಿ ಹಾಕಲಾಗಿದೆ.
ಇನ್ನು ತಮ್ಮ ಹಿಂದಿನ ಲೋಗೋದಲ್ಲಿ ಇದ್ದಂತೆ ಬಾಣದ ಗುರುತು ಹಾಗೂ ಹಿಂಬದಿಯ ಕಡು ಕಂದು ಬಣ್ಣ ಹಾಗೆಯೇ ಇದೆ. ಈ ಹಿಂದೆ ಕೆಲವು ಸೋಷಿಯಲ್ ಮೀಡಿಯಾ ಬಳಕೆದಾದರು ಅಮೇಜಾನ್ ಲೋಗೋ ಬಗ್ಗೆ ವ್ಯಂಗ್ಯ ಮಾಡಿದ್ದು, ಇದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮೀಸೆಯನ್ನು ಹೋಲುತ್ತದೆ ಎಂದಿದ್ದರು. ಇನ್ನು ಕೆಲವರು ಇದು ಹಿಟ್ಲರ್ ಟೂಥ್ ಬ್ರಶ್ ರೀತಿಯಲ್ಲಿ ಇದೆ ಎಂದಿದ್ದರು.