Advertisement
ಗ್ರಾಹಕರಾಗಿ ಮೋಸ ಹೋಗುವುದೇ ನಮ್ಮ ಕರ್ಮ ಎಂದುಕೊಳ್ಳುತ್ತಿದ್ದ ಕಾಲದಲ್ಲಿ ಗ್ರಾಹಕ ಹಕ್ಕು ಕಾಯ್ದೆಯ ನಿಯಮಗಳು ಬಂದವು. ಈ ಆಶಾಕಿರಣದ ಹಾದಿಯಲ್ಲಿ ಆನ್‌ಲೈನ್ ವ್ಯಾಪಾರ ಮಾಡುವ ಕಂಪನಿಗಳು ದೇಶದಲ್ಲಿ ಇವೆ ಎಂಬಂತಹ ಮಾದರಿಯ ಗ್ರಾಹಕ ಪರ ವಾತಾವರಣವನ್ನು ನಾವು ಕಾಣಲು ಸಾಧ್ಯವಾಯಿತು.
Related Articles
Advertisement
ಈ ಕೊಡುಗೆ ಆಫರ್‌ನ ಇ -ಮೇಲ್ ಸ್ವೀಕರಿಸಿದ ಅಮೇಜಾನ್ ಸದಸ್ಯರಿಗೆ ಮಾತ್ರ. ಯಾವ ಅಂಶ ದಪ್ಪಕ್ಷರದಲ್ಲಿ, ಆರಂಭದ ಸಾಲಾಗಿ ಷರತ್ತುಗಳಲ್ಲಿ ನಮೂದಾಗಬೇಕಿತ್ತೋ ಅದಕ್ಕೆ ಕೊನೆಯ ಸ್ಥಾನ ಅಂದರೆ, ಆ ಕಂಪನಿಯ ಆಶಯ ಅರ್ಥವಾಗುವಂತದು. 500 ರೂ. ಭರ್ತಿ ಮಾಡಿದವರಿಗೆ ಹೆಚ್ಚುವರಿ 100 ರೂ. ಸಿಗಲಿಲ್ಲ. ಅಲ್ಲಿಟ್ಟ ಹಣಕ್ಕೆ ಏನಾದರೊಂದು ಖರೀದಿ ಮಾಡಲೇಬೇಕು.
ಕೋಟ್ಯಂತರ ಜನ ಈ ಷರತ್ತು ಗಮನಿಸದೆ ಹಣ ತುಂಬಿದರು. ಈಗ ಕಂಪನಿ ಹೇಳುತ್ತಿದೆ; “ಸಾರಿ. ಈ ರೀತಿ ಆಗಬಾರದಿತ್ತು. ನಮ್ಮ ಕ್ಯಾಷ್‌ಬ್ಯಾಕ್ ಟೀಮ್‌ಗೆ ಈ ಬಗ್ಗೆ ಹೆಚ್ಚಿನ ವಿವರಣೆಗೆ ಕೇಳಲಾಗುವುದು’ ಎಂದು ದೂರಿತ್ತವರಿಗೆ ಅಮೇಜಾನ್ ಹೇಳಿದೆ. ಗಮನಿಸಬೇಕಾದ ಸಂಗತಿ ಎಂದರೆ, ಅದರ ವೆಬ್‌ನಲ್ಲಿ ಮೇಲಿನ ಷರತ್ತು ಹೇಳಿರಲಿಲ್ಲ ಎಂದು ಅದರ ಗ್ರಾಹಕ ಸೇವಾ ಕೇಂದ್ರ ಒಪ್ಪಿಕೊಂಡಿದೆ.
ಅಂದರೆ ಪಾರದರ್ಶಕವಾಗಿರಬೇಕಾದ, ಹಾಗೆಂದು ನಂಬಲಾದ ಒಂದು ಆನ್‌ಲೈನ್ ಕಂಪನಿ ಬೇರೆಯದೇ ದಾರಿ ತುಳಿದಿದೆ. ಇಂಥ ಸನ್ನಿವೇಶದಲ್ಲಿ ಅಮೇಜಾನ್ ಒಂದು ಸ್ವಾಗತಾರ್ಹ ಹೆಜ್ಜೆ ಇಡಬಹುದು. ಸದರಿ ಷರತ್ತನ್ನು ಕೈಬಿಟ್ಟು ಆಫರ್ ಅವಧಿಯಲ್ಲಿ ಹಣ ತುಂಬಿದ ಎಲ್ಲ ಸದಸ್ಯರಿಗೂ ಕ್ಯಾಷ್‌ಬ್ಯಾಕ್ ಘೋಷಿಸಬಹುದು. ನಿರ್ದಿಷ್ಟ ಸಮಸ್ಯೆ ಕಂಡ ಕೂಡಲೇ ಕಾರು ಮಾಡೆಲ್‌ನ್ನು ವಾಪಾಸು ಪಡೆಯುವ ಕಾರು ತಯಾರಕರ ಕ್ರಮದಂತೆ.
ಸಾಮಾಜಿಕ ತಾಣದ ಸಹಾಯ!: ಬಹುಜನರು ಮೋಸ ಹೋಗುತ್ತಿರುವುದು ಫೇಸ್‌ಬುಕ್‌ನಂಥ ಸಾಮಾಜಿಕ ತಾಣಗಳ ಮೂಲಕ ನಡೆಯುವ ಆನ್‌ಲೈನ್ ವ್ಯಾಪಾರದ ಕಮರ್ಷಿಯಲ್ ಜಾಹೀರಾತುಗಳಿಂದ. ಫೇಸ್‌ಬುಕ್‌ನಲ್ಲಿ ನಾವು ಸ್ನೇಹಿತರ ಸಂದೇಶ, ಫೋಟೋ, ವೀಡಿಯೋಗಳಿಗಾಗಿ ಸ್ಟ್ರೋಲ್ ಮಾಡುತ್ತ ಹೋಗುವಾಗ ತಟಕ್ಕಂತ ಯಾವುದೋ ಆನ್‌ಲೈನ್ ಕಂಪನಿಯ ಕಮರ್ಷಿಯಲ್ ಜಾಹೀರಾತು ಕಾಣಿಸುತ್ತದೆ.
ಈ ಕಂಪನಿಯನ್ನು ನಮ್ಮ ಇಂತಿಷ್ಟು ಸ್ನೇತರು ಲೈಕ್ ಮಾಡಿದ್ದಾರೆ ಎಂಬ ಮಾಹಿತಿಯನ್ನೂ ಶೀರ್ಷಿಕೆಯಾಗಿ ಬಳಸಲಾಗಿರುತ್ತದೆ. ಇದು ದೊಡ್ಡ ಸಂಖ್ಯೆಯ ಖರೀದಿದಾರರಿಗೆ ಟೋಪಿ ಹಾಕುತ್ತಿದೆ. ಅತ್ಯಂತ ಸುಂದರ ಡೆಮೋ ಫೋಟೋ, ತೀರ ಆಕರ್ಷಕ ಬೆಲೆ ನೋಡಿ ಪ್ರಜಾnವಂತರೆಂದೆನಿಸಿಕೊಳ್ಳುವವರೂ ಬೇಸ್ತು ಬಿದ್ದಿದ್ದಾರೆ. ಅತ್ಯುತ್ತಮ ಗುಣಮಟ್ಟದ ಸೀರೆ, ಎಲೆಕ್ಟ್ರಾನಿಕ್ ಉಪಕರಣಗಳು ಮೊದಲಾದವುಗಳೆಲ್ಲ ಬಿಕರಿಗಿಡಲಾಗಿರುತ್ತದೆ.
ಫೋಟೋ ನೋಡಿ ಖರೀದಿಸಿದವರು ಹೊಂಡಕ್ಕೆ ಬೀಳುವುದು ನಡೆದೇ ಇದೆ. ಫೇಸ್‌ಬುಕ್‌ನಂಥ ಪ್ರತಿಷ್ಟಿತ ಸಂಸ್ಥೆ ಇಂತಹ ಕಂಪನಿಗಳ ಜಾಹೀರಾತಿಗೆ ಅವಕಾಶ ಕೊಡಬಾರದು. ಜನ ಮೋಸ ಹೋಗಲು ಹೊಸ ಹೊಸ ದಾರಿಗಳನ್ನು ಅವರೇ ಹುಡುಕಿಕೊಳ್ಳುತ್ತಾರೆ! ಗುರುತು ಪರಿಚಯವಿಲ್ಲದ ವೆಬ್‌ಗಳಲ್ಲಿ ಹಲವು ವಸ್ತುಗಳನ್ನು ಖರೀದಿ ಮಾಡುವ ಗ್ರಾಹಕರು ಅಲ್ಲಿಯೇ ನಗದು ಪಾವತಿಸಿದರೆ ಮೋಸ ಹೋಗಬಹುದು ಎಂದು ನಂಬುತ್ತಾರೆ.
ಅದೇ ಕ್ಯಾಷ್ ಆನ್ ಡೆಲಿವರಿ ಇದ್ದರೆ ತಾವು ಕ್ಷೇಮ ಎಂದುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಆರ್ಡರ್ ಹಾಕಿದವರಿಗೆ ಫೋನ್‌ಕಾಲ್ ಬರುತ್ತದೆ. ವಿಳಾಸವನ್ನು ದೃಢೀಕರಿಸಿಕೊಳ್ಳುತ್ತಾರೆ. ವಸ್ತು ಬಂದಾಗ ಅದನ್ನು ತೆರೆದುನೋಡಿ ಹಣ ಪಾವತಿಸುವ ಅವಕಾಶವನ್ನು ಯಾರು ಕೊಡುತ್ತಾರೆ? ಇಂತಹ ಖರೀದಿಯಲ್ಲೂ ಆಗುವುದು ಮೋಸವೇ. ಖರೀದಿಸಿದ ವಸ್ತು ನಿಮಗೆ ಸಮಾಧಾನ ಕೊಡದಿದ್ದರೆ ವಸ್ತುವನ್ನು ಮರಳಿಸಬಹುದು.
ನಾವು ಹಣ ಮರಳಿಸುತ್ತೇವೆ ಎಂಬ ಭರವಸೆಯೂ ಸಿಗುತ್ತದೆ. ಇಲ್ಲಿಯವರೆಗೆ ಯಾವುದೂ ಕಾನೂನು ಪ್ರಕಾರ ಅಸಮ್ಮತ ನಡೆಗಳಲ್ಲ. ಆದರೂ “ಹೊಡೆತ’ ತಿಂದ ಗ್ರಾಹಕ ಕೈಗೆ ಸಿಕ್ಕಿದ ವಸ್ತುವನ್ನು ಮರಳಿಸಿ ಅತ್ತ ವಸ್ತು, ಇತ್ತ ಹಣ ಎರಡೂ ಇಡಿಗಂಟಾಗಿ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಸಿಕ್ಕಿದುದರಲ್ಲಿ ಸಮಾಧಾನಗೊಳ್ಳುತ್ತಾನೆ!
up to ಸೂಪರ್ ಕ್ಯಾಷ್!: up to ಸೂಪರ್ ಕ್ಯಾಷ್ ಎಂಬ ಮಾತುಗಳು ಇರುವ ಆಫರ್‌ಗಳನ್ನು ಗ್ರಾಹಕರು ಯಾವ ಸಂಕೋಚವಿಲ್ಲದೆ ಅನುಮಾನದಿಂದ ನೋಡಬಹುದು. ಉದ್ದುದ್ದದ ಷರತ್ತುಗಳ ಕೊನೆಯಲ್ಲಿಯೇ ಮಾರಕ ನಿಯಮಗಳಿರುವುದು ಸಹಜ! ಬಹುಶಃ ಕೆಳಗಿನಿಂದ ಮೇಲೆ ಓದುವ ಕ್ರಮವನ್ನು ಗ್ರಾಹಕರು ಬೆಳೆಸಿಕೊಳ್ಳುವುದೊಳ್ಳೆಯದು. ಇತ್ತೀಚೆಗೆ ಕ್ಯಾಶ್‌ಬ್ಯಾಕ್ ಎಂಬ ವಾಲೆಟ್‌ಗಳ ಆಕರ್ಷಕ ಸ್ಲೋಗನ್‌ನ ಕೊನೆಯಲ್ಲಿ ಅದನ್ನು ಸೂಪರ್ ಕ್ಯಾಷ್ ಎಂದು ಭಿನ್ನವಾಗಿ ಪರಿಗಣಿಸುವ ಇನ್ನೊಂದು ಕಿವಿ ಮೇಲೆ ಹೂಡುವ ಸೂತ್ರ ಜಾರಿಗೆ ಬಂದಿದೆ.
ಮೊಬಿಕ್ವಿಕ್ ಎಂಬ ಕಂಪನಿ ಹಣ ಸೇರ್ಪಡೆಗೆ ಸೂಪರ್ ಕ್ಯಾಶ್ ಎಂಬ ಆಫರ್ ಮುಂದಿಡುತ್ತದೆ. ಈ ಸೂಪರ್ ಕ್ಯಾಶ್ ಒಂದೇಟಿಗೆ ಖರ್ಚು ಮಾಡಲು ಬರುವುದಿಲ್ಲ. ಗ್ರಾಹಕ ತನ್ನ ಮುಂದಿನ ಪ್ರತಿ ಖರೀದಿಯ ಸಂದರ್ಭದಲ್ಲಿ ವಾಸ್ತವ ಪಾವತಿಯ ಮೊತ್ತದಲ್ಲಿ ಶೇ. 10ರಷ್ಟನ್ನು ಮಾತ್ರ ಬಳಸಿಕೊಳ್ಳಬಹುದು ಎಂಬ ನಿಯಮ ಹೇರುತ್ತದೆ. ಒಬ್ಬ ಗ್ರಾಹಕನ ಖಾತೆಯಲ್ಲಿ 100 ರೂ. ಸೂಪರ್ ಕ್ಯಾಶ್ ಇದೆ ಎಂದುಕೊಳ್ಳಿ.
ಆತನ 100 ರೂ. ಖರೀದಿಯಲ್ಲಿ ಆತ ಸೂಪರ್ ಕ್ಯಾಷ್‌ನ 10 ರೂ.ನ್ನು ಮಾತ್ರ ಬಳಸಿಕೊಳ್ಳಲು 90 ರೂ. ತನ್ನ ಪಾಕೆಟ್‌ನಿಂದ ಪಾವತಿಸಬೇಕು. 100 ರೂ. ಸೂಪರ್ ಕ್ಯಾಶ್ ಕರಗಿಸಿಕೊಳ್ಳಲು ಆತ ಸಾವಿರ ರೂ. ವ್ಯಾಪಾರ ಮಾಡಬೇಕು. ಹಾಗೆಂದು ಏಕಾಏಕಿ ಸಾವಿರ ರೂ. ಪದಾರ್ಥ ಖರೀದಿ ಮಾಡಿ 100 ರೂ. ಸೂಪರ್ ಕ್ಯಾಷ್ ಅನ್ನು ಬಳಸಿಕೊಳ್ಳಬಹುದು ಎಂದುಕೊಂಡಿದ್ದಾರೆ ಅದೂ ತಪ್ಪು. ಇನ್ನೊಂದು ಷರತ್ತನ್ನೂ ಕಂಪನಿ ಹೇರಿರುತ್ತದೆ. ಪ್ರತಿ ಟ್ರಾನ್ಸ್‌ಸ್ಯಾಕ್ಷನ್‌ಗೆ ಪರಮಾವಧಿ 10 ರೂ. ಸೂಪರ್ ಕ್ಯಾಶ್ ಮಾತ್ರ ಬಳಸಬಹುದು!
ಇತ್ತೀಚೆಗೆ ಜನಕ್ಕೆ ಇನ್ನೊಂದು ನಂಬಿಕೆ. ಆನ್‌ಲೈನ್‌ನಲ್ಲಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತದೆ. ಎಷ್ಟೋ ಬಾರಿ ಒಂದು ಖರೀದಿಯ ವಾಸ್ತವ ಬೆಲೆಯನ್ನು ಬೇರೆಡೆ ಪರೀಕ್ಷಿಸುವುದೇ ಇಲ್ಲ. ಎಲ್ಲವೂ ಸಸ್ತಾ ಎಂದು ನಂಬುವುದು ಮೂರ್ಖತನ. ಕೆಲವೊಂದು ಆಫರ್‌ಗಳು ಲಾಭವಾಗಬಹುದಾದರೂ ಅದನ್ನು ಸಮರ್ಥ ಅಧ್ಯಯನದ ಮೂಲಕವೇ ಅರಿತುಕೊಳ್ಳಬೇಕಾಗುತ್ತದೆ. ಈ ನಡುವೆ ಆನ್‌ಲೈನ್ ಕಂಪನಿಗಳಾದ ಇ ಬೇ, ಅಮೆಜಾನ್‌ಗಳು “ರಿಫರ್ಬಶಿಂಗ್ ಐಟಂ’ಗಳನ್ನು ಮಾರಲಾರಂಭಿಸಿವೆ. ವೆಬ್ ಪುಟದ ಎಲ್ಲೋ ಒಂದೆಡೆ ಈ ಮಾಹಿತಿ ಇರುತ್ತದೆಯೇ ವಿನಃ ಕಣ್ಣಿಗೆ ರಾಚುವಂತೆಯಂತೂ ಇರುವುದಿಲ್ಲ.
ಇಷ್ಟಕ್ಕೂ ರಿಫರ್ಬಶಿಂಗ್ ಎಂದರೆ, ಗ್ಯಾರಂಟಿ ಅವಧಿಯಲ್ಲಿ ದೋಷಪೂರಿತವಾದ ತಯಾರಿಕೆಯನ್ನು ಅಧಿಕೃತ ರಿಪೇರಿಗಾರರಿಂದ ಸರಿಪಡಿಸಿ ಮಾರಾಟಗಾರ ಮತ್ತೆ ವ್ಯಾಪಾರಕ್ಕೆ ಬಿಟ್ಟಿರುವಂತದು. ಇದಕ್ಕೆ ಕೇವಲ ಮಾರಾಟಗಾರರ ಗ್ಯಾರಂಟಿ ಮಾತ್ರ ಲಭ್ಯವಾಗುತ್ತದೆ. ಆದರೆ ಖರೀದಿ ದರದಲ್ಲಿ ಸದರಿ ಐಟಂನ ಇವತ್ತಿನ ಎಂಆರ್‌ಪಿಗಿಂತ ಬೆಲೆ ತೀರಾ ಕಡಿಮೆ ಇರುತ್ತದೆ. ಯಾರಿಗುಂಟು ಯಾರಿಗಿಲ್ಲ ಎಂದು ನಾವು ಅಂದುಕೊಂಡರೆ, ನೆನಪಿರಲಿ; ಅದು ಮೂರು ನಾಮವೂ ಇರಬಹುದು.
* ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ