ಮಲೆ ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ದೇವಾಲಯದಲ್ಲಿ ಸೋಮವಾರ ಅಮಾವಾಸ್ಯೆಯ ಪ್ರಯುಕ್ತವಾಗಿ ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯವಲ್ಲದೇ ನೆರೆಯ ತಮಿಳುನಾಡಿ ನಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಮಾವಾಸ್ಯೆಯ ಪ್ರಯುಕ್ತ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದ ರಿಂದ ಧರ್ಮ ದರ್ಶನವಲ್ಲದೇ 300, 100, 50 ರೂ. ಶುಲ್ಕಗಳ ವಿಶೇಷ ಸರತಿ ಸಾಲುಗಳನ್ನು ತೆರೆಯಲಾಗಿತ್ತು. ಪ್ರಾಧಿಕಾರದ ವತಿಯಿಂದ ಭಕ್ತರಿಗೆ ನಿರಂತರ ಅನ್ನದಾಸೋಹದ ವ್ಯವಸ್ಯೆ ಕಲ್ಪಿಸಲಾಗಿತ್ತು. ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಭಕ್ತರು ಉರುಳು ಸೇವೆ, ಪಂಜಿನಸೇವೆ, ರಥೋತ್ಸವದ ಉತ್ಸವ ಮುಂತಾದ ಹರಕೆಗಳನ್ನು ತೀರಿಸಿ, ಕಾಣಿಕೆಗಳನ್ನು ನೀಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು.
ವಿದ್ಯುತ್ ಕಡಿತಕ್ಕೆ ನೀರಿಗೆ ಪರದಾಟ: ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 12 ಗಂಟೆಯ ತನಕ ವಿದ್ಯುತ್ ಕಡಿತಗೊಂಡಿದ್ದರಿಂದ ದೇವಾಲಯದ ಆವರಣದಲ್ಲಿ ನೀರು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಕುಡಿಯುವ ನೀರು ಹಾಗೂ ಶೌಚಾಲಯಕ್ಕೆ ತೆರಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಬಾಟಲಿ ನೀರನ್ನು ಕೊಂಡು ಬಹಿರ್ದೆಸೆಗೆ ಹೊಗುವಂತಹ ಸ್ಥಿತಿ ಎದುರಾಗಿತ್ತು.
ಕೋಟಿ ಕೋಟಿ ಆದಾಯವಿದ್ದರೂ ಸೌಲಭ್ಯವಿಲ್ಲ: ಮಲೆ ಮಹದೇಶ್ವರ ಬೆಟ್ಟ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತರುವಂತಹ ಎರಡನೇ ದೇವಾಲಯವಾಗಿದೆ. ಪ್ರತಿ ತಿಂಗಳು ಹುಂಡಿಯಲ್ಲಿ 1 ರಿಂದ 1.50 ಕೋಟಿ ರೂ. ಸಂಗ್ರಹವಾಗುತ್ತದೆ. ಜೊತೆಗೆ ಉತ್ಸವ ಕೌಂಟರ್, ಲಾಡು ಮಾರಾಟ, ಚಿನ್ನದ ರಥೋತ್ಸವ, ಅತಿಥಿ ಗೃಹ, ಗುತ್ತಿಗೆ ವಿಭಾಗ ಮತ್ತಿತರ ಮೂಲಗಳಿಂದ ದೇವಾಲಯಕ್ಕೆ ಕೋಟ್ಯಂತರ ರೂ. ಆದಾಯವಿದ್ದರೂ ದೇವಾಲಯಕ್ಕೆ ಬರುವಂತಹ ಭಕ್ತರಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಪ್ರಾಧಿಕಾರ ಒದಗಿಸಿ ಕೊಡುತ್ತಿಲ್ಲ.
ಮಾಹಿತಿ ಫಲಕ ಅಳವಡಿಸಿ: ದೇವಾಲಯದ ಬಳಿ ಶಾಶ್ವತ ನೆರಳಿನ ವ್ಯವಸ್ಥೆ, ಮಕ್ಕಳ ಹಾಲುಣಿಸುವ ಕೊಠಡಿ, ದೇವಾಲಯದ ಆಸು ಪಾಸಿನಲ್ಲಿ ಶೌಚಾಲಯ ವ್ಯವಸ್ಥೆ, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸೌಲಭ್ಯಗಳ ಕುರಿತು ನಾಮಫಲಕಗಳನ್ನು ಅಳವಡಿಸಿ ಭಕ್ತಾದಿಗಳಿಗೆ ಸಮರ್ಪಕ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.