Advertisement
1869 ಶಾಲೆ ಆರಂಭ (ಅಂದಾಜು)ಪ್ರಸ್ತುತ 100 ವಿದ್ಯಾರ್ಥಿಗಳು
ಪ್ರಾರಂಭದಲ್ಲಿ ಚೊಕ್ಕಾಡಿಕಟ್ಟೆಯಲ್ಲಿ ಐಗಳ ಶಾಲೆ ಆಗಿತ್ತು ಎನ್ನುತ್ತದೆ ಲಭ್ಯ ಮಾಹಿತಿ. ಅಲ್ಲಿ ಎಷ್ಟು ವರ್ಷ ಇದ್ದಿರಬಹುದು ಎಂಬ ಬಗ್ಗೆ ದಾಖಲೆಗಳು ಇಲ್ಲ. ಈ ಶಾಲೆ ಆರಂಭದ ಹಿಂದೆ ಊರವರ ಪ್ರಯತ್ನ ಇದ್ದು, ಸ್ಥಾಪನೆಗೆ ಶ್ರಮಿಸಿದ ಪ್ರಮುಖರ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಅದಾದ ಬಳಿಕ ಅಜ್ಜನಗದ್ದೆಗೆ (ಈಗಿನ ಅಮರಪಟ್ನೂರು) ಸ್ಥಳಾಂತರವಾಯಿತು. ಸ್ಥಳೀಯ ಬೋರ್ಡ್, ಅನಂತರ ಜಿಲ್ಲಾ ಬೋರ್ಡ್ ಆಡಳಿತಕ್ಕೆ ಒಳಪಟ್ಟಿತ್ತು. 1926ರ ನ. 29ರಂದು ಮಂಜೂರಾತಿ ದೊರೆತಿದೆ. ಶಾಲೆ ಪ್ರಾರಂಭವಾದ ಅನಂತರ 85 ವರ್ಷಕ್ಕೂ ಅಧಿಕ ಕಾಲ ಎಲಿಮೆಂಟರಿ ಶಾಲೆ ಆಗಿತ್ತು.
Related Articles
Advertisement
ಶಾಲೆ ಉಳಿವಿಗೆ ಭೂದಾನ1950-51ರಲ್ಲಿ ಈ ಶಾಲೆಗೆ ಸ್ವಂತ ಜಾಗ ಇಲ್ಲ ಎಂಬ ಕಾರಣಕ್ಕೆ ಕುಕ್ಕುಜಡ್ಕಕ್ಕೆ ವರ್ಗಾಯಿಸುವ ಪ್ರಯತ್ನ ನಡೆಯಿತು. ಆಗ ಶಾಲಾ ಅಧ್ಯಕ್ಷರಾಗಿದ್ದ ಎಸ್. ಸುಬ್ರಾಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು 1951ರ ಡಿ. 22 ರಂದು ಸಭೆ ಸೇರಿದರು. ಶಾಲೆ ವರ್ಗಾಯಿಸದಂತೆ ಜಿಲ್ಲಾ ಬೋರ್ಡ್ ಅಧ್ಯಕ್ಷರನ್ನು ಕೇಳಿಕೊಳ್ಳುವ ನಿರ್ಣಯ ಕೈಗೊಂಡರು. ಶಾಲೆ ಇರುವ ಖಾಸಗಿ ಜಾಗ, ಕಟ್ಟಡವನ್ನು ದಾನಪತ್ರ ರೂಪದಲ್ಲಿ ಗಣಪಯ್ಯ ಅವರ ಕುಟುಂಬಸ್ಥರು ಜಿಲ್ಲಾ ಬೋರ್ಡ್ ಕಮಿಟಿಗೆ ಹಸ್ತಾಂತರಿಸಿದರು. ಸಭೆ ನಿರ್ಣಯದಂತೆ ಪೈಲೂರು ಕೃಷ್ಣಯ್ಯ ಅವರ ನೇತೃತ್ವದಲ್ಲಿ ಮಂಗಳೂರಿಗೆ ತೆರಳಿ ಜಿಲ್ಲಾ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಈ ಎಲ್ಲ ಪ್ರಯತ್ನದ ಫಲವಾಗಿ ಶಾಲೆ ಇಲ್ಲಿ ಉಳಿಯಿತು. ಜತೆಗೆ ಕುಕ್ಕುಜಡ್ಕದಲ್ಲಿ ಹೊಸ ಶಾಲೆ ತೆರೆಯುವಂತಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.
1950ರಿಂದ 1979ರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಎಸ್. ಸುಬ್ರಾಯ ಅಜ್ಜನಗದ್ದೆ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಗರಿಷ್ಠ ಅವಧಿಗೆ ಅವರೆ ಅಧ್ಯಕ್ಷರಾಗಿದ್ದರು. ಕೆ. ಗಣಪಯ್ಯ ಅವರು ಮುಖ್ಯಗುರುವಾಗಿದ್ದ ಸಂದರ್ಭ 40 ಅಡಿ ಉದ್ದದ ಶಾಲಾ ಕಟ್ಟಡ, ಪಿಠೊಪಕರಣ, ಆಟದ ಬಯಲು, ನೀರಿನ ಬಾವಿ ಮೊದಲಾದ ಅಭಿವೃದ್ಧಿ ಕಾಮಗಾರಿ ನಡೆಯಿತು. ಅನಂತರ ಸರಕಾರದ ಬೇರೆ ಯೋಜನೆಯಡಿ ಅಭಿವೃದ್ಧಿ ಕೆಲಸಗಳು ಆಗಿವೆ. 330ಕ್ಕೂ ಅಧಿಕ ವಿದ್ಯಾರ್ಥಿಗಳು
1950ರಲ್ಲಿ ಶಾಲೆಯಲ್ಲಿ 87 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಇದ್ದರು. ಅದರ ಹಿಂದಿನ ಅಂಕಿ ಅಂಶಗಳು ದಾಖಲಾಗಿಲ್ಲ. ಈ ಶಾಲೆ ಹೈಯರ್ ಪ್ರೈಮರಿ ಆದ ಬಳಿಕ 1974ರಲ್ಲಿ 157 ಮಕ್ಕಳಿದ್ದರು. ಕ್ರಮೇಣ ಸಂಖ್ಯೆ 350 ದಾಟಿದ್ದು ಇದೆ. ಪ್ರಸ್ತುತ 1ರಿಂದ 8ನೇ ತರಗತಿ ತನಕ ಇದ್ದು 100 ಮಕ್ಕಳಿದ್ದಾರೆ. 6 ಮಂದಿ ಶಿಕ್ಷಕರಿದ್ದಾರೆ. ಊರಿನ ಏಕೈಕ ಶಾಲೆ
ಆ ಕಾಲದಲ್ಲಿ ಪುತ್ತೂರು ತಾಲೂಕಿಗೆ ಸೇರಿದ್ದ ಸುಳ್ಯದಲ್ಲಿ ಇದ್ದದ್ದು ಅಮರಪಟ್ನೂರು ಮತ್ತು ಸಂಪಾಜೆ ಕಿರಿಯ ಪ್ರಾಥಮಿಕ ಶಾಲೆ. ಹೀಗಾಗಿ ಕುಕ್ಕುಜಡ್ಕ, ಶೇಣಿ, ಚೊಕ್ಕಾಡಿ, ಐವರ್ನಾಡು ಸೇರಿದಂತೆ ತಾಲೂಕಿನ ವಿವಿಧ ಭಾಗದಿಂದ ಕಲಿಕೆಗೆ ಬರುತ್ತಿದ್ದರು. ಪ್ರಸ್ತುತ ಕುಕ್ಕುಜಡ್ಕ, ಚೊಕ್ಕಾಡಿ ಪರಿಸರದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳು ಇವೆ. ಸಾಧಕರು
ಮುಖ್ಯವಾಗಿ “ಮುನಿಸು ತರವೇ ಮುಗುದೇ’ ಪದ್ಯ ರಚಿಸಿದ್ದ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಸಹಿತ ಅನೇಕರು ಇಲ್ಲಿನ ಹಳೆ ವಿದ್ಯಾರ್ಥಿಗಳು. ನೂರಾರು ಮಂದಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ನನ್ನ ಮುತ್ತಜ್ಜ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಿ ಶಾಲೆ ನಡೆಸಲು ನೀಡಿದ್ದರು. ಇದಕ್ಕಾಗಿ ವಾರ್ಷಿಕ 6 ರೂ. ಸಂದಾಯವಾಗುತ್ತಿತ್ತು. 69 ವರ್ಷದ ಹಿಂದೆ ಸ್ವಂತ ಜಾಗ ಇಲ್ಲದ ಕಾರಣ ಕುಕ್ಕುಜಡ್ಕಕ್ಕೆ ಶಾಲೆ ವರ್ಗಾವಣೆಗೆ ಪ್ರಯತ್ನ ನಡೆದಿತ್ತು. ಆಗ ಈ ಊರಿನ ಹಿರಿಯರು ಈ ಸ್ಥಳ ಮಾರಾಟ ರೂಪದಲ್ಲಿ ನೀಡುವಂತೆ ಕೇಳಿಕೊಂಡಿದ್ದರು. ನನ್ನ ಅಜ್ಜ ಹಾಗೂ ಮನೆಯವರು ಸೇರಿ ತೀರ್ಮಾನ ಮಾಡಿ ಮಾರಾಟ ಮಾಡುವ ಬದಲು ಜಾಗವನ್ನು ದಾನರೂಪದಲ್ಲಿ ಶಾಲೆಗೆ ನೀಡಿದ್ದರು. ನನ್ನ ಮುತ್ತಜ್ಜನಿಂದ ತೊಡಗಿ ಮೊಮ್ಮಕ್ಕಳ ತನಕ ನಾವೆಲ್ಲರೂ ಇದೇ ಶಾಲೆಯಲ್ಲಿ ಕಲಿತದ್ದು. ನಾನು 1946ರಿಂದ 1951ರ ಅವಧಿಯಲ್ಲಿ ಇಲ್ಲಿನ ವಿದ್ಯಾರ್ಥಿಯಾಗಿದ್ದೆ.
-ಸುಬ್ರಾಯ ಚೊಕ್ಕಾಡಿ , ಕವಿ ಮತ್ತು ಶಾಲಾ ಹಳೆ ವಿದ್ಯಾರ್ಥಿ ಲಭ್ಯ ಮಾಹಿತಿ ಪ್ರಕಾರ ಶಾಲೆಗೆ 150 ವರ್ಷ ಆಗಿದೆ. ಈ ವರ್ಷ ಸಾಧೈಕ ಶತಮಾನೋತ್ಸವ ಆಚರಿಸಲು ಸಮಿತಿ ರಚಿಸಲಾಗಿದೆ. ಪ್ರಸ್ತುತ 100 ಮಕ್ಕಳಿದ್ದು, 8ನೇ ತರಗತಿ ತನಕ ಕಲಿಕೆ ನಡೆಯುತ್ತಿದೆ.
-ರಮಾಕಿಶೋರಿ ಕೆ., ಮುಖ್ಯಶಿಕ್ಷಕಿ - ಕಿರಣ್ ಪ್ರಸಾದ್ ಕುಂಡಡ್ಕ