ಮಂಗಳೂರು: ಪ್ರಸ್ತುತ ಕೇಂದ್ರ ಸರಕಾರ ಅನುಸರಿಸುತ್ತಿರುವ ಬ್ಯಾಂಕ್‌ಗಳ ವಿಲೀನ ಹಾಗೂ ಬ್ಯಾಂಕ್‌ಗಳಲ್ಲಿ ನೇರ ವಿದೇಶಿ ಹೂಡಿಕೆಗೆ ಅವಕಾಶ ನೀತಿ ಬ್ಯಾಂಕ್‌ಗಳ ಅಸ್ತಿತ್ವ ಹಾಗೂ ದೇಶದ ಆರ್ಥಿಕತೆಗೆ ಮಾರಕವಾಗಿದ್ದು ಇದರ ವಿರುದ್ಧ ದುಡಿಯುವ ವರ್ಗ ಪ್ರಬಲವಾಗಿ ಧ್ವನಿಯೆತ್ತಬೇಕಾಗಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಹೇಳಿದರು.
ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘದ (ಎಐಬಿಒಎ ಸಂಯೋಜಿತ ) ಆಶ್ರಯದಲ್ಲಿ ಪಿವಿಎಸ್ ಕಲಾಕುಂಜದಲ್ಲಿ ಆಯೋಜಿಸಿರುವ ಎರಡು ದಿನಗಳ 19ನೇ ರಾಷ್ಟ್ರೀಯ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಆರ್ಥಿಕತೆ ಪ್ರಸ್ತುತ ಅತ್ಯಂತ ಸಂಕೀರ್ಣ ಕಾಲಘಟ್ಟದಲ್ಲಿದೆ. ಆರ್ಥಿಕ ಚಟುವಟಿಕೆಗಳು ಹಿನ್ನಡೆಗತಿಯಲ್ಲಿ ಸಾಗುತ್ತಿದ್ದು ಉತ್ಪಾದನಾ ಪ್ರಮಾಣ ಕುಸಿದಿದೆ.
ಉದ್ಯೋಗಗಳು ಕಡಿತಗೊಂಡಿವೆ. ಇವೆಲ್ಲದರ ನೇರ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದ ಮೇಲೂ ಆಗುತ್ತಿದೆ. ಐಎಂಎಫ್, ವಿಶ್ವಬ್ಯಾಂಕ್, ವಿದೇಶಿ ಬ್ಯಾಂಕ್‌ಗಳು, ವಿದೇಶಿ ನೇರ ಹೂಡಿಕೆಗಳ ಮುಂದೆ ಮಂಡಿಯೂರುವ ಧೋರಣೆ ದೇಶದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.
ಶತಮಾನ ಸಂಭ್ರಮದತ್ತ ಮುನ್ನಡೆಯುತ್ತಿರುವ ಕರ್ಣಾಟಕ ಬ್ಯಾಂಕ್ ಉತ್ತಮ ನಿರ್ವಹಣೆಯೊಂದಿಗೆ ರಾಷ್ಟ್ರಮಟ್ಟದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ. ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರ ನಾಯಕತ್ವದಲ್ಲಿ ಬ್ಯಾಂಕ್ ಹೊಸ ಸಾಧನೆಯತ್ತ ಸಾಗುತ್ತಿದೆ ಎಂದು ಅಮರ್‌ಜೀತ್ ಕೌರ್ ಶ್ಲಾಘಿಸಿದರು.
ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ. ಜಯರಾಮ ನಾೖಕ್ ಅಧ್ಯಕ್ಷತೆ ವಹಿಸಿದ್ದರು. ಎಐಬಿಒಎ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜನ್, ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನಿಶ್ ಕೆ.ಎಸ್. ಚೌಹಾಣ್, ಕರ್ಣಾಟಕ ಬ್ಯಾಂಕ್ ಅ.ಭಾ.ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಕಾರಂತ್ ಮುಖ್ಯ ಅತಿಥಿಗಳಾಗಿದ್ದರು. ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವ ಸ್ವಾಗತಿಸಿದರು.
ಕರ್ಣಾಟಕ ಬ್ಯಾಂಕ್ ಅಜೆಂಡಾವೇ ಪ್ರಧಾನ
ಶತಮಾನೋತ್ಸವ ಸಂಭ್ರಮದತ್ತ ಸಾಗುತ್ತಿರುವ ಕರ್ಣಾಟಕ ಬ್ಯಾಂಕ್ ಸ್ಥಾಪನೆಯಾದಂದಿನಿಂದಲೂ ನಿರಂತರ ಪ್ರಗತಿ ಪಥದಲ್ಲೇ ಸಾಗುತ್ತ ಬಂದಿದ್ದು ಪ್ರಸ್ತುತ ಬ್ಯಾಂಕಿನ ಒಟ್ಟು ವ್ಯವಹಾರ 1,26,000 ಕೋಟಿ ರೂ. ದಾಟಿದೆ. ಬ್ಯಾಂಕ್‌ನಲ್ಲಿ ಮ್ಯಾನೇಜ್‌ಮೆಂಟ್ ಅಜೆಂಡಾ-ಯೂನಿಯನ್ ಅಜೆಂಡಾಕ್ಕಿಂತಲೂ ಕರ್ಣಾಟಕ ಬ್ಯಾಂಕ್ ಅಜೆಂಡಾವೇ ಪ್ರಧಾನವಾಗಿದ್ದು ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಯೇ ಎಲ್ಲರ ಗುರಿಯಾಗಿದೆ ಎಂದು ಬ್ಯಾಂಕಿನ ಎಂಡಿ ಮಹಾಬಲೇಶ್ವರ ಎಂ.ಎಸ್.ಹೇಳಿದರು.