ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಟಿಯಾಲಾ ನಗರ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ ವಿರುದ್ಧ ಪರಾಜಯಗೊಂಡಿದ್ದಾರೆ.
ಇದನ್ನೂ ಓದಿ:ತುಳು ರಂಗಭೂಮಿಯಲ್ಲಿ ಬೆರಗು ಸೃಷ್ಟಿಸಿದ “ಶಿವದೂತೆ ಗುಳಿಗೆ’! ರಂಗ ವೇದಿಕೆಯಲ್ಲಿ ಸಂಚಲನ
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ಅವರು ತಮ್ಮದೇ ಪಂಜಾಬ್ ಲೋಕ್ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಪಟಿಯಾಲಾ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇಲ್ಲಿ ಆಮ್ ಆದ್ಮಿ ಪಕ್ಷದಿಂದ ಅಜಿತ್ ಪಾಲ್ ಸಿಂಗ್ ಕೊಹ್ಲಿ ಅಖಾಡದಲ್ಲಿದ್ದರು.
ಮಾಜಿ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಅಮರೀಂದರ್ ಸಿಂಗ್ ಅವರು 25,169 ಮತ ಗಳಿಸಿದ್ದು, ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ 39,852 ಮತಗಳಿಸಿ ಜಯಗಳಿಸಿದ್ದಾರೆ. ಪಟಿಯಾಲಾದಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಪಕ್ಷದ ಒಳಜಗಳದಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಚರಣ್ ಜಿತ್ ಸಿಂಗ್ ಚನ್ನಿಯನ್ನು ನೂತನ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇದರಿಂದ ಅಸಮಾಧಾನಗೊಂಡ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು.
ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆ: ನವಜ್ಯೋತ್ ಸಿಂಗ್
ರಾಜ್ಯದ ಜನತೆ ನೀಡಿರುವ ತೀರ್ಪನ್ನು ಪ್ರಾಮಾಣಿಕವಾಗಿ ಸ್ವೀಕರಿಸಿರುವುದಾಗಿ ಕಾಂಗ್ರೆಸ್ ಮುಖಂಡ, ಪಂಜಾಬ್ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಪ್ರತಿಕ್ರಿಯೆ ನೀಡಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಜಯಭೇರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
“ಜನರ ಧ್ವನಿ ದೇವರ ಧ್ವನಿಯಾಗಿದೆ. ಪಂಜಾಬ್ ಜನರ ತೀರ್ಪನ್ನು ಸ್ವೀಕರಿಸುವುದಾಗಿ” ಸಿಧು ಟ್ವೀಟ್ ಮಾಡಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯ ಈವರೆಗಿನ ಮತಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 18, ಬಿಜೆಪಿ 02 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.