ಚಿತ್ತಾಪುರ: ಪಟ್ಟಣದ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ ಶಿಕ್ಷಣ, ಸಾಮಾಜಿಕ, ಕೈಗಾರಿಕೆ, ಬ್ಯಾಂಕಿಂಗ್, ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಬೇಕು ಎಂದು ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ಶರಣಪ್ಪ ನಾಟೀಕಾರ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಮನಾಬಾದ್ ನಲ್ಲಿ ಕಳೆದ 40 ವರ್ಷದಿಂದ ದಾಲ್ ಮಿಲ್ ನಡೆಸುತ್ತಿರುವ ಹಿಂದುಳಿದ ವರ್ಗದ ಮಹಿಳೆ ಅಮರೇಶ್ವರಿ ಅವರು ನಿತ್ಯ ಒಂದು ಸಾವಿರ ಕ್ವಿಂಟಲ್ ತೊಗರಿ ಬ್ಯಾಳಿ ಉತ್ಪಾದಿಸುತ್ತಿದ್ದಾರೆ. ಈ ದಾಲ್ ಮಿಲ್ ರಾಜ್ಯದಲ್ಲೇ ನಂ.1 ಎನ್ನುವ ಖ್ಯಾತಿ ಪಡೆದಿದೆ ಎಂದರು.
ಪಟ್ಟಣದಲ್ಲಿ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶಿಕ್ಷಣದ ಅಭಿವೃದ್ಧಿಗಾಗಿ ದೇಶ-ವಿದೇಶಕ್ಕೆ ಭೇಟಿ ನೀಡಿ, ಅಲ್ಲಿನ ಶಿಕ್ಷಣ ಪದ್ಧತಿ, ಶಾಲೆ ಕಟ್ಟಡ ಹಾಗೂ ಮೂಲ ಸೌಲಭ್ಯಗಳ ಮಾಹಿತಿ ಪಡೆದು ಇಲ್ಲಿಯೂ ಅಳವಡಿಸಿದ್ದಾರೆ ಎಂದು ಹೇಳಿದರು.
ಹುಮನಾಬಾದ ಶಕ್ತಿ ದಾಲ್ ಇಂಡಸ್ಟ್ರೀಸ್, ಶಕ್ತಿ ಟ್ರೇಡಿಂಗ್ ಕಂಪೆನಿ, ಅಮರ್ ಡಿಸ್ಟಲರಿಸ್ ಮುನ್ನಡೆಸುತ್ತಿರುವ ಇವರು ಬೀದರ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರು, ಬೆಂಗಳೂರಿನ ಗಂಗಾ ಮಹಿಳಾ ಬಳಗ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವೆಲ್ಲ ಸಾಧನೆಗಳನ್ನು ಗಮನಿಸಿ ಅಮರೇಶ್ವರಿ ಚಿಂಚನಸೂರ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು. ತಾಪಂ ಮಾಜಿ ಸದಸ್ಯ ಚಂದ್ರಪ್ಪ ಸಾಸರಗಾಂವ, ಗ್ರಾ.ಪಂ ಮಾಜಿ ಅಧ್ಯಕ್ಷೆ ಮರೇಮ್ಮ ನಾಟೀಕಾರ ಇದ್ದರು.
ಶೈಕ್ಷಣಿಕ, ಸಾಮಾಜಿಕ, ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಕಳೆದ 40 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶ್ರಮದಿಂದ ಉದ್ಯಮಿಯಾಗಿ ಹೊರಹೊಮ್ಮಿದ ಏಕೈಕ ಮಹಿಳೆ ಅಮರೇಶ್ವರಿ ಚಿಂಚನಸೂರ ಅವರು. ಹೀಗಾಗಿ ಈ ಬಾರಿ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡುವ ಮೂಲಕ ಮಹಿಳೆಯರಿಗೆ ನ್ಯಾಯ ಒದಗಿಸಬೇಕು.
-ಶರಣಪ್ಪ ನಾಟೀಕಾರ, ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ