ಔರಾದ: ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವಕ್ಕೆ ತಾಲೂಕು ಆಡಳಿತ, ಸಂಘ ಸಂಸ್ಥೆಯ ಮುಖಂಡರು, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ವ್ಯಾಪಾರಿಗಳು ಸಕಲ ಸಿದ್ಧತೆ ಮಾಡಿಕೊಂಡು ಜಾತ್ರೆ ಯಶಸ್ವೀಗೊಳಿಸಲು ಮುಂದಾಗಿದ್ದಾರೆ.
ಪ್ರತಿವರ್ಷ ಮಹಾಶಿವರಾತ್ರಿ ಪ್ರಯುಕ್ತ ಏಳು ದಿನಗಳ ಕಾಲ ನಡೆಯುವ ಹೈ.ಕ. ಭಾಗದ ಏಕೈಕ ಒಂಟೆ ಜಾತ್ರೆ ಎನ್ನುವ ಹೆಗ್ಗಳಿಕೆ ಈ ಜಾತ್ರೆಗಿದೆ. ಜಾತ್ರೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಭಾಗದಿಂದ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಅಪಾರ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಪ್ರಾರ್ಥನೆ ಮಾಡುತ್ತಾರೆ.
ಪಟ್ಟಣದ ಗ್ರಾಮ ದೇವರು ಹಾಗೂ ಉದ್ಭವಲಿಂಗ ಅಮರೇಶ್ವರ ಜಾತ್ರೆಯನ್ನು ಈ ವರ್ಷ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡುವ ಉದ್ದೇಶದಿಂದ ತಾಲೂಕು ಆಡಳಿತ ಮತ್ತು ದೇವಸ್ಥಾನ ಕಮಿಟಿ ಸದಸ್ಯರು ಮಂದಿರಕ್ಕೆ ವಿದ್ಯುತ್ ದೀಪ ಅಲಂಕಾರ ಮಾಡಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲು ರಸ್ತೆ ಪಕ್ಕದಲ್ಲಿ ಹಾಗೂ ರಥ ಸಂಚಾರ ಮಾಡುವ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಟೆಂಟ್ ಗಳನ್ನು ಹಾಕುತ್ತಿದ್ದಾರೆ. ನಗರ ಅಲಂಕಾರ ಸಮಿತಿ ಸದಸ್ಯರು ಹಾಗೂ ಯುವಕು ಪಟ್ಟಣದಲ್ಲಿ ಸ್ವತ್ಛತೆ ಹಾಗೂ ಮುಖ್ಯ ರಸ್ತೆಯಲ್ಲಿ ಸ್ವಾಗತ ಪೆಂಡಾಲ್ ಗಳನ್ನು ಹಾಕಿ ಪಟ್ಟಣ ಸಿಂಗಾರ ಮಾಡಿದ್ದಾರೆ.
ಸರ್ಕಾರಿ ಕಚೇರಿ ಹಾಗೂ ಪಟ್ಟಣದ ವ್ಯಾಪಾರಿಗಳು ತಮ್ಮ ಅಂಗಡಿ ಹಾಗೂ ಕಚೇರಿ ಮೇಲೆ ವಿದ್ಯುತ್ ದೀಪಗಳನ್ನು ಹಾಕಿ ಜಾತ್ರೆಗೆ ಇನ್ನಷ್ಟು ಕಳೆ ಬರುವಂತೆ ಮಾಡಿದ್ದಾರೆ. ಹೈ.ಕ. ಭಾಗದಲ್ಲಿ ಏಕೈಕ ಒಂಟೆ ಜಾತ್ರೆ ಎನ್ನುವ ಹೆಗ್ಗಳಿಕೆ ಹೊಂದಿದ ಅಮರೇಶ್ವರ ಜಾತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ಒಂಟೆಗಳು ಬರುವುದು ತೀರಾ ಕಡಿಮೆಯಾಗಿದೆ. ಆದರೆ ಪಶು ಪ್ರದರ್ಶನಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಭಾಗದ ರೈತರು ತಮ್ಮ ಜಾನುವಾರುಗಳನ್ನು ಪ್ರದರ್ಶನಕ್ಕೆ ತರುತ್ತಾರೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕೂಡ ಕೃಷಿ ಇಲಾಖೆಯಿಂದ ಪ್ರತಿ
ವರ್ಷ ನೀಡಲಾಗುತ್ತದೆ. ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ತಾಲೂಕು ಹಾಗೂ ಬೇರೆ ರಾಜ್ಯದ ಕುಸ್ತಿ ಪಟುಗಳು ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಜಾತ್ರೆಯ ಐದನೇ ದಿನ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾವಹಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಪ್ರಾರ್ಥಿಸುತ್ತಾರೆ.
ಜಾತ್ರೆಯ ಮಾಹಿತಿ: ಮಾ.1ರಂದು ಅಮರೇಶ್ವರನ ಪಾದ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಮಾ.2ರಂದು ಅಮರೇಶ್ವರ ದೇವಸ್ಥಾನದಲ್ಲಿ ಭಜನೆ ಕಿರ್ತನೆಗಳು ಹಾಗೂ ಸಂಗೀತ ದರ್ಬಾರ್ ಕಾರ್ಯಕ್ರಮ ನಡೆಯುತ್ತವೆ. ಮಾ. 3ರಂದು ಜಾನಪದ ಗಾಯನ ಸಂಗೀತ ದರ್ಬಾರ್ ಕಾರ್ಯಕ್ರಮ, ಮಾ. 4ರಂದು ಅಗ್ನಿ ಪೂಜಾ, ಮಾ.5ರಂದು ರಥೋತ್ಸವ, ಮಾ.6ರಂದು ಜಂಗಿ ಕುಸ್ತಿ, ಮಾ.11 ರಂದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪಶು ಪ್ರದರ್ಶನ ನಡೆಯಲಿವೆ.
ಜಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಮರೇಶ್ವರ ದೇವಸ್ಥಾನ ಹಾಗೂ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ನಾಲ್ವರು ಸಿಪಿಐ, 7 ಜನ ಪಿಎಸ್‌ಐ, 80 ಸಿಬ್ಬಂದಿ ಹಾಗೂ 12 ಜನ ಮಹಿಳಾ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪಿಎಸ್‌ಐ ನಾನಾಗೌಡ ತಿಳಿಸಿದ್ದಾರೆ.