ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಎಚ್‌ಕೆಸಿಸಿಐ) ಸಂಸ್ಥೆಯ 2018-20ನೇ ಸಾಲಿಗಾಗಿ ರವಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಮರನಾಥ ಸಿ. ಪಾಟೀಲ ಪ್ಯಾನಲ್ ಮೇಲುಗೈ ಸಾಧಿಸಿದೆ. ಚುನಾವಣೆ ನಂತರ ನಡೆದ ಮತ ಎಣಿಕೆಯು ತಡರಾತ್ರಿಯೂ ನಡೆದು ಫಲಿತಾಂಶ ಘೋಷಿಸಲಾಯಿತು. ಅಮರನಾಥ ಪಾಟೀಲ ವರು ಸೋಮನಾಥ ಟೆಂಗಳಿ ಇವರಿಗಿಂತ 500 ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಅಮರನಾಥ ಪಾಟೀಲ ಅವರ ಅಧ್ಯಕ್ಷ ಆಯ್ಕೆ ಘೋಷಣೆ ಮಾತ್ರ ಬಾಕಿ ಉಳಿದಿತ್ತು.
ಆಡಳಿತ ಮಂಡಳಿಯ 19 ಸದಸ್ಯ ಸ್ಥಾನಗಳಲ್ಲಿ 16 ಜನ ಅಮರನಾಥ ಪ್ಯಾನಲ್‌ನಿಂದ ಆಯ್ಕೆಯಾಗಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಟೆಂಗಳಿ ಪ್ಯಾನಲ್‌ನಿಂದ ಸ್ಪರ್ಧಿಸಿದ್ದ ರವಿ ಸರಸಂಬಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮೀಕಾಂತ ಮೈಲಾಪುರ ಅವರನ್ನು ಸೋಲಿಸಿ ಶರಣಬಸಪ್ಪ ಎಂ. ಪಪ್ಪಾ ಆಯ್ಕೆಯಾದರು. ಗೌರವ ಕಾರ್ಯದರ್ಶಿಯಾಗಿ ಮಂಜುನಾಥ ಜೇವರ್ಗಿ ಅವರನ್ನು ಸೋಲಿಸಿ ಶಶಿಕಾಂತ ಪಾಟೀಲ ಆಯ್ಕೆಯಾದರು.
ಚುನಾಯಿತರಾದ ಸದಸ್ಯರು: ಸಚಿನ್ ಉಮಾಕಾಂತ ನಿಗ್ಗುಡಗಿ, ಅಮಿತ ಫಾರ್ಮರ್, ಗೋಪಾಲ ಬುಚನಳ್ಳಿ, ಜಗದೀಶ ಕಲಗಂಚಿ, ಗಿರೀಶ ಜಗನ್ನಾಥ ಅಣಕಲ್, ಸಂತೋಷಕುಮಾರ ಲಂಗರ್, ಅಣ್ಣಾರಾವ್ ಮಾಲೀಪಾಟೀಲ, ಸತೀಶ ರಂಗದಾಳ, ಮನೀಶ ಜಾಜೂ, ಸುಭಾಷ ಮಂಗಾಣೆ, ಸುನೀಲಕುಮಾರ ಮಚೆಟ್ಟಿ, ವೆಂಕಟ ಚಿಂತಾಮಣಿರಾವ್, ಪ್ರಭು ಶಿರಗುಪ್ಪಿ, ಮಹ್ಮಮ್ಮದ ಇರ್ಫಾನ್ ಅಹ್ಮದ್, ವೀರಭದ್ರಯ್ಯ ಟೆಂಗಳಿ.
ಗ್ರಾಮೀಣ ಭಾಗದಿಂದ ಶಿವರಾಜ ಇಂಗಿನಶೆಟ್ಟಿ, ವೀರೇಂದ್ರ ಬಾಸರೆಡ್ಡಿ, ಶಿವಪ್ರಸಾದ ಅರಳಿ ಹಾಗೂ ಕಾರ್ಪೊರೇಟ್ ವಿಭಾಗದಿಂದ ಚನ್ನಬಸಯ್ಯ ನಂದಿಕೋಲ್ ಚುನಾಯಿತರಾಗಿದ್ದಾರೆ. ಶೇ.80 ರಷ್ಟು ಮತದಾನ: ರವಿವಾರ ನಡೆದ ಚುನಾವಣೆಯಲ್ಲಿ ಶೇ. 80ರಷ್ಟು ಮತದಾನವಾಗಿತ್ತು.
ಸಂಸ್ಥೆಯ 2934 ಮತದಾರರ ಪೈಕಿ 2283 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಬಿರು ಬಿಸಿಲಿನ ನಡುವೆ ನಗರದ ಹೃದಯ ಭಾಗ ಸೂಪರ್ ಮಾರ್ಕೆಟ್‌ದಲ್ಲಿರುವ ಎಚ್‌ಕೆಸಿಸಿಐ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತದಾರರು ಉತ್ಸುಕತೆಯಿಂದ ತಮ್ಮ ಹಕ್ಕು ಚಲಾಯಿಸುತ್ತಿರುವುದು ಕಂಡು ಬಂತು. ಸಂಸ್ಥೆಯ ಅಧ್ಯಕ್ಷ-ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ
ಹಾಗೂ 15 ಜನ ಆಡಳಿತ ಮಂಡಳಿ ಸದಸ್ಯ ಹಾಗೂ ಮೂರು ಗ್ರಾಮಾಂತರ ಭಾಗದ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು.