Advertisement

ಬೆಳ್ಳಾರೆ: ಬಂಗ್ಲೆಗುಡ್ಡೆಗೆ ಸ್ಥಾನ-ಮಾನ ಎಂದು?

10:19 AM Apr 05, 2022 | Team Udayavani |

ಸುಳ್ಯ: ಅಮರ ಸುಳ್ಯ ಕ್ರಾಂತಿಯ ಕಹಳೆ ಊದಿದ್ದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ, ದಾಖಲೆಗಳ ಮ್ಯೂಸಿಯಂ, ಉದ್ಯಾನವನ ನಿರ್ಮಿಸುವುದಾಗಿ ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಹಾಗೂ ಅದರ ಮೊದಲು ಬೆಳ್ಳಾರೆಯಲ್ಲಿ ನಡೆದ ಅಮೃತಮಹೋತ್ಸವ ಸಭೆಯಲ್ಲಿ ಕ್ರಮದ ಭರವಸೆಯನ್ನು ಜಿಲ್ಲಾಧಿಕಾರಿಗಳು, ಶಾಸಕರು ಘೋಷಿಸಿದ್ದರು. ಆದರೆ ಇನ್ನೂ ಸೌಧ ನಿರ್ಮಾಣದ ಹಾಗೂ ಇತರ ಕೆಲಸಗಳು ನಡೆದಿಲ್ಲ. ಅಮರ ಸುಳ್ಯ ಕ್ರಾಂತಿಯನ್ನು ನೆನಪಿಸುವ ಬೆಳ್ಳಾರೆಯ ಬಂಗ್ಲೆಗುಡ್ಡೆಗೆ ಸ್ಥಾನ-ಮಾನ ಸಿಗುವುದು ಎಂದು? ಎಂಬ ಮಾತು ಈಗ ಕೇಳಲಾರಂಭಿಸಿದೆ.

Advertisement

2021ರ ಮಾರ್ಚ್‌ನಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಸ್ವಾತಂತ್ರ್ಯ ಜಾಥಾ ಅಮರ ಬೆಳ್ಳಾರೆ ವಿಜಯೋತ್ಸವಕ್ಕೆ ಬೆಳ್ಳಾರೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಚಾಲನೆ ನೀಡಿದ್ದರು. ಆ ದಿನ ಜಿಲ್ಲಾಡಳಿತ ನೇತೃತ್ವದಲ್ಲಿ ಬ್ರಿಟಿಷರು ಖಜಾನೆ ಹೊಂದಿದ್ದ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಗಣ್ಯ ಅತಿಥಿಗಳ, ಇತಿಹಾಸ ತಜ್ಞರ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.

ಅಲ್ಲದೆ ಕಳೆದ ವರ್ಷದ ಸ್ವಾತಂತ್ರ್ಯ ದಿನದಂದು ಐತಿಹಾಸಿಕ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಸೌಧ ನಿರ್ಮಿಸುವುದಾಗಿ ಘೋಷಣೆ ಮಾಡಲಾಗಿತ್ತು. ಈ ವೇಳೆ ಬಂಗ್ಲಗುಡ್ಡೆಗೆ ಸೌಧದ ಸ್ಪರ್ಶ ಸಿಗಲಿದೆ ಎಂದು ಜನತೆ ಸಂಭ್ರಮಿಸಿದ್ದರು. ಅಮರ ಸುಳ್ಯದ ಸ್ವಾತಂತ್ರ್ಯ ಕ್ರಾಂತಿಯ ಬಗೆಗಿನ ಸಂಗ್ರಾಮಕ್ಕೆ ಸ್ಮಾರಕ ರೀತಿಯ ಕಟ್ಟಡ ನಿರ್ಮಾಣಗೊಂಡು ಬಂಗ್ಲೆಗುಡ್ಡೆಯಲ್ಲಿ ಸುಳ್ಯ ಕ್ರಾಂತಿ ನೆನಪಿಸುವ ಕಾರ್ಯ ನಡೆಯಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಘೋಷಿಸಿ 7 ತಿಂಗಳೂ ಕಳೆದರೂ ಈ ಬಗ್ಗೆ ಯಾವುದೆ ಪ್ರಕ್ರಿಯೆ ನಡೆದಿಲ್ಲ .

ಜನತೆಯ ಬೇಡಿಕೆ

ಸುಳ್ಯದಲ್ಲಿ ಇಲ್ಲಿಗೆ ಸಂಬಂಧಿಸಿದಂತೆ ಐತಿಹಾಸಿಕ ಸ್ಮಾರಕವಿಲ್ಲ. ಸುಳ್ಯಕ್ಕೊಂದು ಇತಿಹಾಸ ಇತ್ತು ಎನ್ನುವುದು ಮುಂದಿನ ಪೀಳಿಗೆಗೆ ತಿಳಿಸಲು ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸೌಧ ನಿರ್ಮಾಣವಾಗಬೇಕು ಹಾಗೂ ಅದರಲ್ಲಿ ಮ್ಯೂಸಿಯಂ, ಗ್ರಂಥಾಲಯದ ವ್ಯವಸ್ಥೆ ಸೇರಿದಂತೆ ಸುಳ್ಯದ ಇತಿಹಾಸ ತಿಳಿ ಹೇಳುವ ಬಗ್ಗೆ ವ್ಯವಸ್ಥೆಗಳಿರಬೇಕು ಎಂಬುದು ಸುಳ್ಯದ ಜನರ ಬೇಡಿಯಾಗಿತ್ತು. ಈ ಬಗ್ಗೆ ಹಲವಾರು ಸಾರ್ವಜನಿಕ ಮನವಿ ಸಲ್ಲಿಕೆ, ಸಭೆಗಳನ್ನು ನಡೆಸಲಾಗಿದೆ. 1837ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪಾದಾರ್ಪಣೆ ಮಾಡಿದ ಹುತಾತ್ಮರಿಗೆ ಇದುವರೆಗೆ ಸರಿಯಾದ ಸ್ಮಾರಕವೂ ನಿರ್ಮಾಣಗೊಂಡಿಲ್ಲ.

Advertisement

ಅಮರ ಸುಳ್ಯ ಕ್ರಾಂತಿ

ಅಮರ ಸುಳ್ಯದ ರೈತರು 1837ರಲ್ಲಿ ಬ್ರಿಟಿಷರ ವಿರುದ್ಧ ಸಂಘಟಿತರಾಗಿ ಕೊಡಗು-ಕೆನರಾ ರೈತ ಬಂಡಾಯಕ್ಕೆ ಕಾರಣರಾಗಿದ್ದರು. ಅವರು ಮೊದಲಿಗೆ ಬೆಳ್ಳಾರೆ ಕೋಟೆಯಲ್ಲಿದ್ದ ಖಜಾನೆಯನ್ನು 1837ರ ಮಾ.30ರಂದು ವಶಪಡಿಸಿಕೊಂಡರು. ಈ ರೀತಿ ಆರಂಭಗೊಂಡ ಬಂಡಾಯ 1837ರ ಎ.5ರಂದು ಮಂಗಳೂರಿನ ಬಾವುಟ ಗುಡ್ಡೆ ವಶಪಡಿಸಿಕೊಳ್ಳುವವರೆಗೆ ನಡೆಯಿತು. ಆದರೆ 13 ದಿನಗಳ ಬಳಿಕ ತಲಶ್ಯೆರಿ ಮತ್ತು ಮುಂಬಯಿಂದ ಬಂದ ಬ್ರಿಟಿಷರ ಬೃಹತ್‌ ಸೇನೆಯೆದುರು ರೈತರ ದಂಡು ಸೋತಿತು. ಬ್ರಿಟಿಷರು ದಂಗೆಯ ನಾಯಕರನ್ನು ಹಿಡಿದು ಸಾರ್ವಜನಿಕವಾಗಿ ಗಲ್ಲಿಗೇರಿಸಿದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಶೀಘ್ರ ಸ್ಮಾರಕ ನಿರ್ಮಾಣವಾಗಲಿ

ಬೆಳ್ಳಾರೆಯಲ್ಲಿ ಸ್ವಾತಂತ್ರ್ಯ ಯೋಧರಿಗೆ ಸ್ಮಾರಕ ನಿರ್ಮಾಣ ವಾಗಬೇಕೆಂದು 1998ರಿಂದಲೇ ನಾನು ಮತ್ತು ದೇವಿಪ್ರಸಾದ್‌ ಪ್ರಯತ್ನಿಸುತ್ತಾ ಬಂದಿದ್ದೇವೆ. ಬಳಿಕವೂ ಬೆಳ್ಳಾರೆಯಲ್ಲಿ ಹಲವಾರು ಸಭೆ ನಡೆಸಿ ವಿಚಾರವನ್ನು ಎತ್ತಿ ಹೇಳಲಾಗಿತ್ತು. ಕಳೆದ ಬಾರಿ ಬೆಳ್ಳಾರೆಗೆ ಡಿಸಿ, ಸಚಿವ ಅಂಗಾರ ಅವರು ಬಂದಿದ್ದು, ಸಮಿತಿ ರಚಿಸಿ ಆ ಮೂಲಕ ಕೆಲಸ ನಿರ್ವಹಿಸುವ ಎಂದಿದ್ದರು. ಆಗಸ್ಟ್‌ 15ರ ಮೊದಲು ಸ್ಮಾರಕ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ. -ಡಾ| ಪ್ರಭಾಕರ ಶಿಶಿಲ, ಹಿರಿಯ ವಿದ್ವಾಂಸರು.

Advertisement

Udayavani is now on Telegram. Click here to join our channel and stay updated with the latest news.

Next