Advertisement

ನಾನೇನು ಬಳೆ ತೊಟ್ಟಿಲ್ಲ: ಪಾಟೀಲ

04:26 PM Mar 22, 2018 | |

ವಿಜಯಪುರ: ಬಸವ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಧ್ವನಿ ಎತ್ತಿದ ಕಾರಣಕ್ಕೆ ಪಂಚ ಪೀಠದವರ ನೇತೃತ್ವದಲ್ಲಿ ಮಠಾಧೀಶರು ಚುನಾವಣೆಯಲ್ಲಿ ನನ್ನನ್ನು ಸೋಲಿಸುವ ಬೆದರಿಕೆ ಹಾಕುತ್ತಿದ್ದು ನಾನೇನು ಬಳೆ ತೊಟ್ಟು ಕುಳಿತಿಲ್ಲ. ಬಸವಜನ್ಮ ಭೂಮಿ ಋಣ ತೀರಿಸಲು ಹುಟ್ಟಿರುವ ನಾನು ಇಂಥ ಸವಾಲು ಎದುರಿಸಲು ಸಿದ್ಧ ಎಂದು ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಪಂಚಪೀಠಾಧೀಶರ ಪಂಥಾಹ್ವಾನ ಸ್ವೀಕರಿಸಿದ್ದಾರೆ.

Advertisement

ಬುಧವಾರ ನಗರದಲ್ಲಿ ಸಾರಿಪುತ್ರ ಬುದ್ಧ ವಿಹಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್‌ ಧರ್ಮ ಕಾರ್ಯಕ್ಕೆ ಮುಂದಡಿ ಇಟ್ಟಾಗ ಎದುರಿಸಿದ ಸಂಕಷ್ಟಗಳನ್ನೇ ನಾನೂ ಇದೀಗ ಎದುರಿಸುತ್ತಿದ್ದೇನೆ. ಆದರೆ ಬಸವಣ್ಣನ ಹೆಸರು ಹೇಳಿಕೊಂಡು ರಾಜಕೀಯ ಮಾಡಿದವರ ಬಣ್ಣ ಬಯಲಾಗಿದೆ. ಧರ್ಮ ಕಾರ್ಯಕ್ಕಾಗಿ ಇಂಥ ಸಂಕಷ್ಟಗಳಿಗೆ ಎದೆಯೊಡ್ಡಲು
ನಾನು ಸಿದ್ಧವೂ ಆಗಿದ್ದೇನೆ. ಇಷ್ಟಕ್ಕೂ ನನ್ನ ಸಮುದಾಯದ ಜನರಿಗೆ ನ್ಯಾಯ ಒದಗಿಸುವ ಧರ್ಮ ಕಾರ್ಯಕ್ಕೆ ಮುಂದಾಗಿದ್ದೇ ತಪ್ಪಾ? ಬಸವಣ್ಣನ ಕನಸಿನ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದ್ದೇ ತಪ್ಪಾ? ಬಸವಣ್ಣನ ತತ್ವಕ್ಕೆ ಬದ್ಧವಾಗಿದ್ದೆ ತಪ್ಪು ಎಂದಾದರೆ ಇಂಧ ತಪ್ಪನ್ನು ಲಕ್ಷ ಲಕ್ಷ ಬಾರಿ ಮಾಡಲು ಸಿದ್ಧ ಎಂದರು. 

ಬಸವಜನ್ಮಭೂಮಿಗೆ ಬಂದು ಬಸವಣ್ಣನ ನೆಲದಲ್ಲೇ ನನ್ನನ್ನು ರಾಜಕೀಯವಾಗಿ ಚುನಾವಣೆಯಲ್ಲಿ ಸೋಲಿಸುವುದಾಗಿ ಹೇಳುವ ಇವರಿಗೇ ಇಷ್ಟು ಧೈರ್ಯ ಇರಬೇಕಾದರೆ, ಬಸವಜನ್ಮ ಭೂಮಿಯಲ್ಲಿ ಜನ್ಮ ಪಡೆದಿರುವ ನಾನೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ ಎಂದು ಗುಡುಗಿದರು.

ಇಷ್ಟಕ್ಕೂ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಾಧ್ಯವೇ ಇಲ್ಲ. ಇದರ ಹೊರತಾಗಿಯೂ ಇಂಥ ಶಕ್ತಿಗಳು ಒಗ್ಗೂಡಿ ಸೋಲಿಸಿದರೆ ನಾನು ಕಳೆದುಕೊಳ್ಳುವುದು ಏನೂ ಇಲ್ಲ. ಏಕೆಂದರೆ ನನ್ನ ಸೋಲು ಬಸವಾದಿ ಶರಣರ ತತ್ವಗಳ ಸೋಲಾಗುತ್ತದೆ, ಬುದ್ಧನ ಸೋಲಾಗುತ್ತದೆ, ಅಂಬೇಡ್ಕರ್‌ ಅವರ ಸೋಲಾಗುತ್ತದೆ ಎಂದು ವಿಶ್ಲೇಷಿಸಿದರು.

ರಾಜಕೀಯಕ್ಕೆ ನಾನು ಇಷ್ಟಪಟ್ಟು ಬಂದಿಲ್ಲ. ನನ್ನ ತಂದೆಯ ನಿಧನದ ನಂತರ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿರುವ ನಾನು ಜನತೆ ಕೊಟ್ಟ ಅಧಿಕಾರವನ್ನು ಅದರಲ್ಲೂ ಜಲ ಸಂಪನ್ಮೂಲ ಸಚಿವನಾಗಿ ರಾಜ್ಯವನ್ನು, ಬಸವಜನ್ಮ ಭೂಮಿಯನ್ನು ಸಮೃದ್ಧ ನೀರಾವರಿ ಮಾಡಿದ್ದೇನೆ. ಇದೇ ನಾನು ಮಾಡಿದ ತಪ್ಪು ಎಂದಾದರೆ ಇಂತ ತಪ್ಪನ್ನು ಮಾಡಿದ ಖುಷಿ ನನಗಿರಲಿ ಎಂದು ಆವೇಶ ಭರಿತರಾದರು.

Advertisement

ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆಗೆ ಎನ್ನುವ ಮನಸ್ಥಿತಿಯ ರಾಜಕೀಯ ಮಾಡುವ ಮಂದಿಯಿಂದ ನಾನು ಕಲಿಯಬೇಕಾದುದು ಏನೂ ಇಲ್ಲ. ಸಂವಿಧಾನ ಬದಲಾವಣೆ ಎಂದರೆ ಅದು ಅಂಬೇಡ್ಕರ್‌ ಅವರನ್ನು ಜೀವಂತ ಕೊಂದಂತೆ ಎಂಬ
ಕನಿಷ್ಠ ಜ್ಞಾನವೂ ಇಲ್ಲದ ಜನರಿಂದ ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ನನ್ನ ಹಿಂದೆ ಬುದ್ಧ-ಬಸವ-ಅಂಬೇಡ್ಕರ್‌
ಅವರನ್ನು ನಂಬಿದ ಸಿದ್ಧಾಂತಗಳಿವೆ ಇಂಥ ಸಿದ್ಧಾಂತಗಳೇ ನನ್ನ ಗೆಲುವಿನ ಶ್ರೀರಕ್ಷೆ ಎಂದರು.

ಬುದ್ಧ ವಿಹಾರ ನಿರ್ಮಾಣಕ್ಕೆ ಜಲ ಸಂಪನ್ಮೂಲ ಇಲಾಖೆಯಿಂದ 3 ಕೋಟಿ ರೂ. ಅನುದಾನ ನೀಡಿದ ಸಚಿವ ಡಾ| ಎಂ.ಬಿ. ಪಾಟೀಲ ಅವರನ್ನು ಬುದ್ಧ ವಿಹಾರ ಸಮಿತಿಯವರು ಬುದ್ಧನ ಬೆಳ್ಳಿ ಮೂರ್ತಿ ನೀಡಿ ಸನ್ಮಾನಿಸಿದರು.

ಜಪಾನ್‌ ಝನ್‌ ಮಾಸ್ಟರ್‌ ಬಂತೆ ಬೋಧಮ್ಮ, ಚಾಮರಾಜನಗರದ ಬೋದಿಧಮ್ಮ ಬಂತೆ ದತ್ತತೆರೆ, ಟಿ.ನರಸೀಪುರದ ಬೋದಮ್ಮ
ಬೋರತ್ನ ಬಿಕ್ಕು ಸಂಘ ಸಾನ್ನಿಧ್ಯ ವಹಿಸಿದ್ದರು. ಶಾಸಕ ರಾಜು ಆಲಗೂರು ಚಾಲನೆ ನೀಡಿದರು. ಮಹಾರಾಷ್ಟ್ರದ ನಿವೃತ್ತ ಐಜಿಪಿ
ಬಸವರಾಜ ಆಕಾಶಿ, ಗೋಪಾಲ ಕಾರಜೋಳ ವೇದಿಕೆಯಲ್ಲಿದ್ದರು. ಚಂದ್ರಶೇಖರ ಕೊಡಬಾಗಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ
ಕ್ಯಾತನವರ ಸ್ವಾಗತಿಸಿದರು. ಹುಮಾಯೂನ್‌ ಮಮದಾಪುರ ನಿರೂಪಿಸಿದರು. ಜಿತೇಂದ್ರ ಕಾಂಬಳೆ ವಂದಿಸಿದರು.

ಬ್ರಾಹ್ಮಣರೂ ಪ್ರತ್ಯೇಕ ಧರ್ಮಕ್ಕೆ ಹೋರಾಡಲಿ: ಸಚಿವ ಪಾಟೀಲ
ವಿಜಯಪುರ: ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ರವಾನಿಸಿರುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ 2 ಸಿ ಅನ್ವಯ ಮಾನ್ಯತೆ ನೀಡಲೇಬೇಕು. ಹಿಂದೂಗಳಿಗಿಂತ ಲಿಂಗಾಯತರು ಹೇಗೆ ಭಿನ್ನ ಎಂಬುದಕ್ಕೆ ಐತಿಹಾಸಿಕ ದಾಖಲೆಗಳನ್ನು ನೀಡಿದ್ದೇವೆ. ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ಪ್ರತ್ಯೇಕ ಧರ್ಮದ ಮಾನ್ಯತೆಗೆ ನಿರಾಕರಿಸಿದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದೂಗಳಿಗಿಂತ ಲಿಂಗಾಯತ ಆಚರಣೆ ಭಿನ್ನತೆ,
ಐತಿಹಾಸಿಕ ದಾಖಲೆಗಳು, ನ್ಯಾ.ನಾಗಮೋಹನ ದಾಸ ವರದಿ, ಈ ಹಿಂದಿನ ಜನಗಣತಿ ದಾಖಲೆ ಸೇರಿದಂತೆ ಪ್ರತ್ಯೇಕ ಧರ್ಮಕ್ಕೆ ಅಗತ್ಯ ದಾಖಲೆ ನೀಡಿದ್ದೇವೆ. ಆರೆಸ್ಸೆಸ್‌ ಹಾಗೂ ಇತರೆ ರಾಜಕೀಯ ಒತ್ತಡಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸದಿದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದು ನಮ್ಮ ಮುಂದಿರುವ ಅಂತಿಮ ಆಯ್ಕೆ. ಜೈನರು ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದುಕೊಂಡದ್ದು ಸುಪ್ರೀಂ ಕೋರ್ಟನಿಂದಲೇ ಎಂದರು.

ಬ್ರಾಹ್ಮಣರು ತಾವು ಹಿಂದೂಗಳಿಗಿಂತ ಭಿನ್ನವೆಂದು ದಾಖಲೆ ಸಲ್ಲಿಸಿ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಲಿಂಗಾಯತರು ಹಿಂದೂಗಳಲ್ಲ, ಹಿಂದೂಗಳಿಗಿಂತ ಭಿನ್ನವಾದ ಪ್ರತ್ಯೇಕ ಧರ್ಮೀಯರು ಎಂಬುದನ್ನು ಐತಿಹಾಸಿಕ ದಾಖಲೆಗಳ ಸಮೇತ ಸಾಬೀತು ಮಾಡಿದ್ದೇವೆ. ಬ್ರಾಹ್ಮಣರೂ ಪ್ರತ್ಯೇಕ ಧರ್ಮ ಪಡೆಯಲಿ. ಲಿಂಗಾಯತರು ಪ್ರತ್ಯೇಕ ಧರ್ಮವಾದರೆ ಹಿಂದೂ ಧರ್ಮ ಒಡೆಯುತ್ತದೆ ಎಂದು ಹೇಳುವವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದರೆ ಧರ್ಮ ಒಡೆಯುವುದಿಲ್ಲವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ರಾಜಕೀಯ ಪ್ರೇರಿತ ಐಟಿ ದಾಳಿಗೆ ಸಿದ್ಧತೆ
ನನ್ನ ಹಾಗೂ ನನ್ನ ಕುಟುಂಬ, ಆಪ್ತೆಷ್ಟರ ಮೇಲೆ ರಾಜಕೀಯ ಪ್ರೇರಿತ ಐಟಿ ದಾಳಿ ನಡೆಸಲು ಸಿದ್ಧತೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ನನ್ನ ದೂರವಾಣಿ ಕದ್ದಾಲಿಕೆಯೂ ನಡೆದಿದೆ. ಆದರೆ ರಾಜಕೀಯ ದ್ವೇಷದ ಇಂಥ ದಾಳಿಗಳಿಗೆ ನಾನು
ಹೆದರುವುದಿಲ್ಲ. ಐಟಿ ದಾಳಿ ಮೂಲಕ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಸ್ಥರ ಕುತಂತ್ರಕ್ಕೆ ಫ‌ಲಿಸುವುದಿಲ್ಲ. ನನ್ನ ದೂರವಾಣಿ ಕದ್ದಾಲಿಕೆ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದೇನೆ. ಕೇಂದ್ರ ಗುಪ್ತಚರ ಇಲಾಖೆ ಮೂಲಕವೂ ನನ್ನ ದೂರವಾಣಿ ಕರೆ ಕದ್ದಾಲಿಕೆ ನಡೆದಿದೆ. ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಖಾಸಗಿ ವ್ಯಕ್ತಿಗಳು, ಹ್ಯಾಕರ್‌ಗಳು ದೂರವಾಣಿ ಕದ್ದಾಲಿಕೆ ಮಾಡುವ ಸಾಧ್ಯತೆ ಇದೆ. 

ಹೀಗಾಗಿ ಚೀನಾ, ಇಸ್ರೇಲ್‌ ಹ್ಯಾಕರ್‌ ಮೂಲಕ ನನ್ನ ದೂರವಾಣಿ ಕದ್ದಾಲಿಕೆ ನಡೆಸಿದ್ದಾರೆ. ಈ ಕುರಿತು ನನ್ನ ಬಳಿ ದೂರವಾಣಿ ಕದ್ದಾಲಿಕೆಯ ಅಗತ್ಯ ಸಾಕ್ಷಾಧಾರಗಳಿದ್ದು, ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next