ಮಂಡ್ಯ: ನಾನೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ. ಸುಮ್‌ಸುಮ್ನೆ ನಾನು ಆಡದಿರುವ ಮಾತುಗಳನ್ನು ಆಡಿರುವುದಾಗಿ ಸುಳ್ಳು ಹೇಳಿದರೆ ನಾನು ಒಪ್ಪಿಕೊಳ್ಳುವುದಿಲ್ಲ ಎಂದು ನಟ ಯಶ್ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.
ತಾಲೂಕಿನ ದ್ಯಾಪ ಸಂದ್ರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಯಶ್ ಈ ವಿಚಾರದಲ್ಲಿ ಸಿಎಂಗೆ ಯಾರೋ ಮಿಸ್‌ಗೈಡ್ ಮಾಡಿರಬಹುದು. ಅವರು ಈಗ ಬ್ಯುಸಿಯಾಗಿದ್ದು, ಕನ್‌ಫ್ಯೂಸ್ ಆಗಿರಬೇಕು. ಬಿಡುವಾದಾಗ ನೋಡಿ ಯೋಚಿಸಲಿ. ಜೆಡಿಎಸ್ ಪಕ್ಷದಲ್ಲೂ ಸಾಕಷ್ಟು ಜನ ನನ್ನ ಸ್ನೇಹಿತರಿದ್ದಾರೆ. ನಾನು ಅವರ ಪರವಾಗಿ ಪ್ರಚಾರಕ್ಕೆ ಹೋಗಿದ್ದನಾ. ಅವರಿಗೆ ಯಾರು ಗೈಡ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಸಿನಿಮಾದವರು, ಸಿನಿಮಾದವರು ಅಂತ ಹಗುರವಾಗಿ ಮಾತನಾಡುತ್ತಿದ್ದರು. ಪರ್ಸನಲ್ ಆಗಿ ಅಟ್ಯಾಕ್ ಮಾಡಲಾರಂಭಿಸಿದಾಗ ನಾವು ಉತ್ತರ ಕೊಡ್ತಿದ್ದೆವು. ಜಾಸ್ತಿ ಮಾತನಾಡ್ತಿದ್ದಾರೆ ಅಂತಾರೆ. ಎಷ್ಟು ಮಾತನಾಡಬೇಕು ಅಂತ ನಿರ್ಧರಿಸಲು ಅವರು ಯಾರು? ಇದು ರೌಡಿ ರಾಜ್ಯವಲ್ಲ. ಇದು ಪ್ರಜಾಪ್ರಭುತ್ವ. ಎಲ್ಲರಿಗೂ ಮಾತನಾಡುವ
ಸ್ವಾತಂತ್ರ್ಯವಿದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿ ಯಾರೇ ಮಾತನಾಡಲಿ ಅದಕ್ಕೆ ವಾಪಸ್ ಮಾತನಾಡುವ ಶಕ್ತಿ ನಮಗೂ ಇದೆ ಎಂದು ಮಾರುತ್ತರ ನೀಡಿದರು.
ಕಾರ್ಯಕರ್ತರು ಸುಮ್ಮನಿದ್ದಾರೆ ಎಂದರೆ ಏನರ್ಥ. ಅವರು ಒಬ್ಬ ರಾಜ್ಯದ ಮುಖ್ಯಮಂತ್ರಿ. ಅವರ ಘನತೆಗೆ ತಕ್ಕಂತೆ ಮಾತನಾಡಬೇಕು. ಹಾಗಾದರೆ ನಾವು ಸುಮಲತಾ ಪರವಾಗಿ ಪ್ರಚಾರ ಮಾಡೋದೇ ತಪ್ಪಾ. ನಮ್ಮ ಪ್ರಚಾರ ಏನೇ ಇದ್ದರೂ ಅದು ನಮ್ಮ ಅಭ್ಯರ್ಥಿ ಪರವಾಗಿರುತ್ತದೆ. ಅವರ ಪರ ಮಾತನಾಡ್ತೀನಿ. ಇದರಲ್ಲಿ ಏನು ತಪ್ಪಿದೆ. ಬೇರೆಯವರಿಗೆ ವಿರೋಧವಾಗಿ ನಾವೇನೂ ಮಾತನಾಡಿಲ್ಲ. ಮಂಡ್ಯ ಯಾರ ಸ್ವತ್ತು ಅಲ್ಲ. ಜನರು ಯಾರದು ಸರಿ, ಯಾರದು ತಪ್ಪು ಅಂತ ನೋಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ಜನರು ಅವರ ಬಗ್ಗೆ ಮಾತನಾಡುತ್ತಾರೆ ಎಂದರು.
ಚುನಾವಣಾಧಿಕಾರಿಗಳ ದಾಳಿ, ಐಟಿ ದಾಳಿಯಲ್ಲ: ದರ್ಶನ್
ಪಾಂಡವಪುರ: ನನ್ನ ಫಾರ್ಮ್ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿಗೋದ್ರೆ ಅವರಿಗೆ ಸಿಗೋದು ಕಡ್ಲೆ ಒಟ್ಟು, ಬೂಸಾ, ಹಿಂಡಿ ಹಾಲು, ಬಿದ್ದಿರೋ ತೆಂಗಿನಕಾಯಿ ಸಿಗಬಹುದು ಅಷ್ಟೇ ಎಂದು ಚಿತ್ರನಟ ದರ್ಶನ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಏತಕ್ಕಾಗಿ ನನ್ನ ಫಾರ್ಮ್ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಅಭಿಮಾನಿಗಳೇ ಖರ್ಚಿಗೆ ಹಣ ಕೊಡುತ್ತಿದ್ದಾರೆ.
ಇದನ್ನು ಅರ್ಥ ಮಾಡಿಕೊಂಡರೆ ಸಾಕು ಎಂದು ದಳಪತಿಳಿಗೆ ದರ್ಶನ್ ಡಿಚ್ಚಿ ಹೊಡೆದರು. ಐಟಿ ಅಧಿಕಾರಿಗಳು ನನ್ನ ಫಾರ್ಮ್ಹೌಸ್ ಮೇಲೆ ಏಕೆ ದಾಳಿ ಮಾಡ್ತಾರೆ. ನನ್ನದೆಲ್ಲವೂ ಕರೆಕ್ಟ್ಆಗಿದೆ. ನಾವು ಇಲ್ಲಿ ಓಡಾಡುತ್ತಿದ್ದೇವಲ್ಲ. ಅಲ್ಲಿ ಏನಾದರೂ ಸಿಗಬಹುದು ಅಂತ ದಾಳಿ ಮಾಡಿದ್ದಾರೆ ಎಂದರು. ಚುನಾವಣೆ ಮುಗಿದ ಬಳಿಕ ನಟರು ಕೈಗೆ ಸಿಕ್ತಾರಾ ಎನ್ನುವ ಟೀಕೆಗೆ ಪ್ರತಿಕ್ರಿಯಿಸಿ, ನಾವೆಲ್ಲೂ ಹೇಳಿಕೊಂಡು ಮಾಡೊಲ್ಲ. ಮಾಡೋದನ್ನೇ ಹೇಳುತ್ತೇವೆ.
ಪ್ರತಿ ಭಾನುವಾರ ನಮ್ಮ ಮನೆ ಬಳಿ ಬಂದು ನೀವೇ ನೋಡಿ ಅವತ್ತು ನಾನು ಎಲ್ಲರಿಗೂ ಸಿಗ್ತಿವಿ. ನಾನೇ ನಿತ್ಯ ಅಭಿಮಾನಿಗಳಿಗೆ ಸೋಮವಾರ ದಿಂದ ಶನಿವಾರದ ತನಕ ಕೆಲಸ ಮಾಡಿ. ಭಾನುವಾರ ಆರಾಮವಾಗಿರಿ ಅಂತೀನಿ ಎಂದು ಹೇಳಿದರು.