ನವದೆಹಲಿ: ನೆರೆರಾಷ್ಟ್ರ ಪಾಕಿಸ್ತಾನದೊಂದಿಗೆ ಸ್ನೇಹಯುತ ಸಂಬಂಧ ಹೊಂದಬೇಕು ಎನ್ನುವುದು ಭಾರತದ ಸದಾಕಾಲದ ಆಶಯ. ಆದರೆ, ಅಂಥ ಒಪ್ಪಂದಗಳಿಗೂ ಮುನ್ನ ಭಯೋತ್ಪಾದನೆ, ಹಿಂಸಾಚಾರದಂಥ ಪ್ರವೃತ್ತಿಗಳು ನಿಲ್ಲಬೇಕು, ಆಗಷ್ಟೇ ಸ್ನೇಹ ವೃದ್ಧಿ ಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಇತ್ತೀಚೆಗೆಷ್ಟೇ ಸಂದರ್ಶನವೊಂದರಲ್ಲಿ ಭಾರತದೊಂದಿಗೆ ಶಾಂತಿ ಒಪ್ಪಂದಕ್ಕೆ ಕರೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು.
ಈ ಕುರಿತು ಮಾಧ್ಯಮಗಳು ಬಗ್ಚಿ ಅವರನ್ನು ಪ್ರಶ್ನಿಸಿವೆ. ಈ ವೇಳೆ ಉತ್ತರಿಸಿದ ಅವರು, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತ ಅಭಿಲಾಷೆಯೂ ಹೌದು. ಆದರೆ, ಅದಕ್ಕೂ ಮುನ್ನ ಪಾಕ್ ಭಯೋತ್ಪಾದನೆ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಬೇಕು. ಆ ಬಳಿಕವಷ್ಟೇ ಒಪ್ಪಂದದ ವಿಚಾರ ಪ್ರಸ್ತಾಪವಾಗಲು ಸಾಧ್ಯ ಎಂದಿದ್ದಾರೆ.