Advertisement

ನಿಮ್ಮೊಂದಿಗೆ ಸದಾ ಇರುವೆ

03:32 PM May 22, 2018 | Team Udayavani |

ದಾವಣಗೆರೆ: ಬಿ.ಎಸ್‌. ಯಡಿಯೂರಪ್ಪ ಶನಿವಾರ ವಿಶ್ವಾಸ ಮತಯಾಚನೆಗೆ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮನನೊಂದು ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮದ ಹುಣಸೆಮರದ ಚನ್ನಬಸಪ್ಪ ಮನೆಗೆ ಸೋಮವಾರ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

Advertisement

ಇಳಕಲ್‌ನ ಡಾ| ಮಹಾಂತಶ್ರೀಗಳ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ, ಹೆಲಿಕಾಪ್ಟರ್‌ನಲ್ಲಿ ಸಂತೇಬೆನ್ನೂರಿಗೆ ಆಗಮಿಸಿ
ಚನ್ನಬಸಪ್ಪ ಮನೆಗೆ ತೆರಳಿ ಪತ್ನಿ ರತ್ನಮ್ಮ, ಮಕ್ಕಳಾದ ನಾಗರಾಜ್‌ ಇತರರಿಗೆ ಅವರು ಸಾಂತ್ವನ ಹೇಳುವಾಗ ತೀವ್ರ ಭಾವುಕರಾದರು.

ಕೆಲ ಕಾಲ ಸಾವರಿಸಿಕೊಂಡ ನಂತರ ಅವರು, ನಿಮ್ಮೊಂದಿಗೆ ಸದಾ ಇರುವೆ ಎಂದು ಭರವಸೆ ತುಂಬಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಮನೆಯ ಸದಸ್ಯರೊಂದಿಗೆ ಚರ್ಚಿಸಿದರು.

ಮನೆಗೆ ತೆರಳುವ ಮುನ್ನ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಚನ್ನಬಸಪ್ಪನವರು ನನಗೆ ಅಧಿಕಾರ ಸಿಗಲಿಲ್ಲ ಅಂತ ಸುದ್ದಿ ಕೇಳಿ ಅಲ್ಲೇ ಸ್ಥಳದಲ್ಲೇ ಕುಸಿದು ದೈವಾಧೀನರಾಗಿದ್ದರು.
 
ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದಾಗಿ ತಿಳಿಸಿದರು. ಯಡಿಯೂರಪ್ಪ ತೆರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಬಸಪ್ಪ ಪತ್ನಿ ರತ್ನಮ್ಮ, ನಮ್ಮ ಮನೆಯವರು(ಚನ್ನಬಸಪ್ಪ) ಶನಿವಾರ ಟಿವಿ
ನೋಡುತ್ತಲೇ ಇದ್ದರು. ಯಡಿಯೂರಪ್ಪರಿಗೆ ಅಧಿಕಾರ ಸಿಗಲಿಲ್ಲ ಎಂದು ಬಹಳ ಬೇಜಾರು ಮಾಡಿಕೊಂಡಿದ್ದರು. ಹತ್ತು ನಿಮಿಷದಲ್ಲಿ ಇಷ್ಟೆಲ್ಲ ಆಗಿ ಹೋಯಿತು ಎಂದರು.

ಚನ್ನಬಸಪ್ಪ ಪುತ್ರ ಎಚ್‌.ಸಿ. ನಾಗರಾಜ್‌ ಮಾತನಾಡಿ, ನಮ್ಮ ಅಪ್ಪಾಜಿ ಶನಿವಾರ ಪೂರ್ತಿ ಟಿವಿ ಮುಂದೆಯೇ ಇದ್ದರು.
ಮಧ್ಯಾಹ್ನದವರೆಗೂ ಯಡಿಯೂರಪ್ಪ ಸರ್ಕಾರ ಇರುತ್ತದೆ ಎನ್ನುತ್ತಲೇ ಇದ್ದರು.

Advertisement

ಯಾವಾಗ ವಿಶ್ವಾಸಮತ ಸಿಗುವುದಿಲ್ಲ ಎಂಬುದು ಕೇಳಿ ಬಂದಿತೋ ಅವಾಗಿನಿಂದ ಒಂಥರ ಆಗಿದ್ದರು. ಯಡಿಯೂರಪ್ಪ ನವರು ಭಾಷಣ ಮಾಡುವಾಗ ಇದ್ದಕ್ಕಿದ್ದಂತೆ ಕೆಳಕ್ಕೆ ಬಿದ್ದರು. ಬರೀ 10 ನಿಮಿಷದಲ್ಲೇ ಅವರು ಮೃತಪಟ್ಟರು ಎಂದು ಆ ಕ್ಷಣ ಸ್ಮರಿಸಿದರು. ಚನ್ನಬಸಪ್ಪ ಪುತ್ರಿ ಸುಧಾ ಮಾತನಾಡಿ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದಾಗಲೇ ನಮ್ಮ ಅಪ್ಪ(ಚನ್ನಬಸಪ್ಪ)ನ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆ ಎಂದರು.

ಎಚ್‌ಡಿಕೆಗೆ ಧಿಕ್ಕಾರ…
ಹಂಗಾಮಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ನೂರಾರು ಜನರು
ಯಡಿಯೂರಪ್ಪಗೆ ಜೈ… ಏನೇ ಆಗಲಿ ನಾಲ್ಕನೇ ಟೈಮ್‌ ನೀವೇ ಮುಖ್ಯಮಂತ್ರಿ…. ಎಂಬ ಘೋಷಣೆ ಕೂಗಿದರು. ಕುಮಾರಸ್ವಾಮಿಗೆ ಧಿಕ್ಕಾರ… ಧಿಕ್ಕಾರ ಎಂದು ಜೋರಾಗಿ ಕೂಗಾಟ ಪ್ರಾರಂಭಿಸುತ್ತಿದ್ದಂತೆ ಖುದ್ದು ಯಡಿಯೂರಪ್ಪ ಅವರೇ ಸುಮ್ಮನಿರುವಂತೆ ಸನ್ನೆ ಮಾಡಿದರು. ಆದರೂ, ಕುಮಾರಸ್ವಾಮಿಗೆ ಧಿಕ್ಕಾರ ಎಂಬ ಘೋಷಣೆ ಮೊಳಗಿತು.
ಹಾಗೆಲ್ಲ ಕೂಗದಂತೆ ಯಡಿಯೂರಪ್ಪ, ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಸಂಜ್ಞೆ ಮಾಡಿದ ನಂತರ ಘೋಷಣೆ ನಿಂತವು.
 
ಕಿಕ್ಕಿರಿದ ಜನ…
ಚನ್ನಗಿರಿ ರಸ್ತೆಯಲ್ಲಿರುವ ಮೃತ ಚನ್ನಬಸಪ್ಪನವರ ಮನೆಗೆ ಯಡಿಯೂರಪ್ಪ ಸಾಂತ್ವನ ಹೇಳಲಿಕ್ಕೆ ಬಂದ ಮತ್ತು ಹೋಗುವ ಸಂದರ್ಭದಲ್ಲಿ ಜನ ಕಿಕ್ಕಿರಿದು ಜಮಾಯಿಸಿದ್ದರು. ಮುಗಿಲು ಮುಟ್ಟುವಂತೆ ಯಡಿಯೂರಪ್ಪ ಪರ ಘೋಷಣೆ ಕೂಗಿದರು. ಮೂರು ದಿನದಲ್ಲಿ ಅಧಿಕಾರ ಕಳೆದುಕೊಂಡಿರುವ ಯಡಿಯೂರಪ್ಪ ಪರ ಅನೇಕರು ಸಹಾನುಭೂತಿ ವ್ಯಕ್ತಪಡಿಸಿದರು. ಅಭಿಮಾನಿಯೊಬ್ಬರು, ನೀವೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಕೈ ಮುಗಿದು ಬೇಡಿಕೊಂಡರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. 

ಪ್ರತ್ಯೇಕ ರಾಜ್ಯದ ಕೂಗು…
ಮೃತ ಚನ್ನಬಸಪ್ಪ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಗಿರಿ ಶಾಸಕ ಕೆ. ಮಾಡಾಳ್‌ ವಿರುಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ್‌ ಮಾಡಾಳ್‌, ಎಲ್ಲ ಅವಕಾಶಗಳು ಚಿತ್ರದುರ್ಗದ ಆಚೆ ಕಡೆ ಇರುವರಿಗೆ ಮಾತ್ರವೇ ಸಿಗುತ್ತಿವೆ. ಈ ಭಾಗದವರಿಗೆ ಅವಕಾಶ ಸಿಕ್ಕುತ್ತಿಲ್ಲ. ಸಿಕ್ಕರೂ ಬಿಡುತ್ತಿಲ್ಲ. ಏನೇ ಇದ್ದರೂ ದೇವೇಗೌಡ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌ ಅವರಿಗೇ ಆಗಬೇಕು. ಹಾಗಾಗಿ ಕೂಡಲೇ ದಾವಣಗೆರೆಗೆ ರಾಜಧಾನಿ ಬದಲಾವಣೆ ಮಾಡಬೇಕು. ಇಲ್ಲವೇ ಪ್ರತ್ಯೇಕ ರಾಜ್ಯವನ್ನೇ ಮಾಡಬೇಕು ಎಂದು ಒತ್ತಾಯಿಸಿ  ನಾಳೆ (ಮಂಗಳವಾರ) ಯಿಂದಲೇ ಹೋರಾಟ ಪ್ರಾರಂಭಿಸುತ್ತೇವೆ. ಚನ್ನಬಸಪ್ಪನವರ ಸಾವೇ ನಮ್ಮ ಹೋರಾಟಕ್ಕೆ ಮುನ್ನುಡಿ ಎಂದು ಆಕ್ರೋಶಭರಿತರಾಗಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next