Advertisement

“ಚುನಾವಣೆಗೆ ಸದಾ ಸಿದ್ಧರಾಗಿರಬೇಕು’: ಸಿದ್ದರಾಮಯ್ಯ

11:17 PM Jun 28, 2019 | Lakshmi GovindaRaj |

ಬಾಗಲಕೋಟೆ: “ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದಿಲ್ಲ. ಅದೆಲ್ಲ ಊಹಾಪೋಹ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕೆಲಸ ಮಾಡಲು ಚುನಾವಣೆಗೆ ಯಾವಾಗಲೂ ಸಿದ್ಧವಾಗಿರಬೇಕು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

Advertisement

ಬಾದಾಮಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ನಾನು ಹೇಳಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಆತ್ಮಾವಲೋಕನ ಮಾಡಿಕೊಳ್ಳಲು ಮೈಸೂರಿನಲ್ಲಿ ಸಭೆ ಮಾಡಿದ್ದೆ. ಅದು ಚುನಾವಣೆ ತಯಾರಿಗಾಗಿ ನಡೆದ ಸಭೆಯಲ್ಲ.

ಗ್ರೌಂಡ್‌ ರಿಪೋರ್ಟ್‌ಗಾಗಿ ನಾನು ಸಭೆ ನಡೆಸುತ್ತಿದ್ದೇನೆ. ಹಾಗಂತ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಯಾಕೆ ಭಾವಿಸಬೇಕು’ ಎಂದರು. “ನಾನು ಹಿಂದೆ ಜೆಡಿಎಸ್‌ನಲ್ಲಿದ್ದಾಗ ಅಹಿಂದ ಸಂಘಟನೆ ಮಾಡಿದ್ದಕ್ಕೆ ಜೆಡಿಎಸ್‌ನಿಂದ ಹೊರ ಹಾಕಿದ್ರು ಎಂದು ಅಮರೇಗೌಡ ಬಯ್ನಾಪುರ ಹೇಳಿದ್ದಾರೆ. ಇದು ಸತ್ಯ.

ಈಗ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿದೆ ಎಂದ ಮಾತ್ರಕ್ಕೆ ಸತ್ಯ ತಿರುಚಬೇಕಾ? ಅಹಿಂದ ಎಂಬುದು ಪ್ರತ್ಯೇಕ ಸಂಘಟನೆ ಇಲ್ಲ. ನಾನು ಅದಕ್ಕಾಗಿ ಪ್ರತ್ಯೇಕ ಸಂಘಟನೆಯೂ ಮಾಡಲ್ಲ. ಗ್ರೆಸ್‌ನಲ್ಲಿದ್ದುಕೊಂಡೇ ಅಹಿಂದ ವರ್ಗದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ’ ಎಂದರು.

ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ: “ಬಾದಾಮಿಯ ಆಲೂರ ಎಸ್‌.ಕೆ. ಗ್ರಾಮದಲ್ಲಿ ನಾನು ಭಾಷಣದ ವೇಳೆ ಕೆಲಸ ಮಾಡುವವರಿಗೆ ಮತ ಕೊಡಿ, ನಿದ್ದೆ ಮಾಡುವವರಿಗೆ ಮತ ಕೊಡಬೇಡಿ ಎಂದು ಹೇಳಿದ್ದೇನೆ. ಅಭಿವೃದ್ಧಿ ಕೆಲಸ ಮಾಡಿದವರಿಗೆ ಜನ ಮತ ಹಾಕಬೇಕೋ ಬೇಡವೋ? ಇದರಲ್ಲಿ ತಪ್ಪೇನಿಲ್ಲ. ನಾನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲ್ಲ. ನನ್ನ ಹೇಳಿಕೆಯನ್ನು ಮಾಧ್ಯಮಗಳು ಕುಮಾರಸ್ವಾಮಿ ಅವರ ಹೇಳಿಕೆಗೆ ಲಿಂಕ್‌ ಮಾಡಿವೆ’ ಎಂದು ಸಿದ್ದರಾಮಯ್ಯ ಹೇಳಿದರು.

Advertisement

“ತಿಪ್ಪರಲಾಗ ಹಾಕಿದ್ರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ’: “ಕರ್ನಾಟಕದಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿಯವರು ಅಧಿಕಾರಕ್ಕೆ ಬರಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯವರನ್ನು ಮಮತಾ ಬ್ಯಾನರ್ಜಿ ನೋಡಿಕೊಳ್ಳುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, “ಕರ್ನಾಟಕ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಅದು ಅಸಾಧ್ಯದ ಮಾತು’ ಎಂದರು.

ಸಿಎಂ ಕುಮಾರಸ್ವಾಮಿ 8 ದಿನಗಳ ವಿದೇಶ ಪ್ರವಾಸಕ್ಕೆ ಹೊರಟಿದ್ದು, ಈ ವೇಳೆ ರಾಜ್ಯದಲ್ಲಿ ಆಪರೇಶನ್‌ ಕಮಲ ನಡೆಯಬಹುದು ಎಂಬುದೆಲ್ಲ ಸುಳ್ಳು. ಬಿಜೆಪಿಯವರಿಗೇ ಆಪರೇಶನ್‌ ಆಗಬೇಕಿದೆ. ಅಲ್ಲದೇ ಮುಖ್ಯಮಂತ್ರಿಗಳು ಎಲ್ಲವನ್ನೂ ನನ್ನೊಂದಿಗೆ ಚರ್ಚೆ ಮಾಡಲ್ಲ.

ಸಮನ್ವಯ ಸಮಿತಿ ಸಭೆಯಲ್ಲಿ ನಾವು ಭೇಟಿ ಮಾಡುತ್ತೇವೆ. ಆ ಬಳಿಕ ನಾವಿಬ್ಬರೂ ಭೇಟಿಯಾಗುವುದು ಅಪರೂಪ. ಅವರು ಎಲ್ಲವನ್ನೂ ನನಗೆ ಹೇಳಿ ಮಾಡಬೇಕೆಂದೇನಿಲ್ಲ . ಸಿದ್ದರಾಮಯ್ಯ ವರ್ಚಸ್ಸು ಕಡಿಮೆಯಾಗಿದೆ ಎಂದು ಹೇಳಲು ಶ್ರೀರಾಮುಲು ಯಾರು? ಅದನ್ನು ಜನ ಹೇಳಬೇಕು ಎಂದರು.

ಬಾದಾಮಿಯಲ್ಲಿ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ವೇಳೆ ಹಣೆಗೆ ಉದ್ದನೆಯ ಕುಂಕುಮ ನಾಮ ಹಚ್ಚಿಕೊಳ್ಳಲು ನಾನು ಬೇಡ ಅಂದಿದ್ದೇನೆ. ಅದರಲ್ಲಿ ತಪ್ಪೇನು? ಕುಂಕುಮ ಹಚ್ಚಿಕೊಳ್ಳಬೇಕೆಂದು ಕಡ್ಡಾಯವಿದೆಯೇ?
-ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next