ಮೂಡುಬಿದಿರೆ: ಸ್ಟೆಕೇಟೊ…ಎಂದರೆ ಸಂಗೀತದಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ನೋಟ್‌ಗಳನ್ನು ಪ್ರಸ್ತುತಪಡಿಸುವುದು ಎಂಬರ್ಥವಿದೆ… ಶನಿವಾರ ಆಳ್ವಾಸ್ ವಿರಾಸತ್‌ನಲ್ಲಿ ಚೆನ್ನೈಯ ಸ್ಟೆಕೆಟೋ ಬ್ಯಾಂಡ್ ತಂಡ ಒಂದಕ್ಕಿಂತ ಭಿನ್ನವಾದ ಶೈಲಿಯ, ಕನ್ನಡ ಸಹಿತ ಹಲವು ಭಾಷೆಯ ಹಾಡುಗಳ ಮೂಲಕ ಸೇರಿದ್ದ ಭರ್ಜರಿ ಶ್ರೋತೃಗಳಲ್ಲಿ ಪುಳಕ ಎಬ್ಬಿಸಿತು.
ಆರಂಭದಲ್ಲಿ “ರೋಜಾ ಜಾನೆಮನ್ ತೂಹೀ ಮೇರಾದಿಲ್’ ಹಾಡಿನ ವಾದ್ಯಗೋಷ್ಠಿಯೊಂದಿಗೆ ತಮ್ಮ ಮೇಳ ಆರಂಭಿಸಿದಾಗಲೇ ವಿದ್ಯಾರ್ಥಿಗಳು ಹರ್ಷೋದ್ಗಾರದ ಅಲೆ ಎಬ್ಬಿಸಿ ಕಲಾವಿದರಿಂದ ವಾವ್ ಎನ್ನಿಸಿಕೊಂಡರು. ಆ ಬಳಿಕ ಸಾಥಿಯಾ ಸಾಥಿಯಾ ಹಾಡು ವಿದ್ಯಾರ್ಥಿಗಳಲ್ಲಿ ರೋಮಾಂಚನ ತಂದರೆ ಬಳಿಕ ಕನ್ನಡದ ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ಪ್ರೇಕ್ಷಕರಲ್ಲಿ ಖುಷಿಯ ಅಲೆಗಳನ್ನೆಬ್ಬಿಸಿತು.
ಚೆನ್ನೈ ಮೂಲದವರಾಗಿದ್ದು, ಮೂಲ ಕನ್ನಡದವರಲ್ಲದಿದ್ದರೂ ಹಲವಾರು ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಿದರು. ದಿಲ್ ಸೇ ಚಿತ್ರದ ಜಿಯಾ ಜಲೆ ಜಾನ್ ಜಲೆ ಮೂಲಕ ಗಾಯಕಿ ನಿರಂಜನಾ ರಮಣನ್ ಮನ ರಂಜಿಸಿದರು. ಪುಷ್ಪ ಸಿನೆಮಾದ ಹಿಟ್ ಎನಿಸಿರುವ ಪುಷ್ಪ ಪುಷ್ಪ, ಶ್ರೀವಲ್ಲಿ ಮಾತೆ ಮಾಣಿಕ್ಯವಾಯಿನೆ, ಓ ಸಾಮೆ ಹಾಡಿದರು.
ಜಿಯಾ ಜಿಯಾ ಜಿಯಾರೇ…ಓ ಓ ನಾವು ಮೂಲಕನ್ನಡ ಮಾತನಾಡುವವರಲ್ಲ ಎನ್ನುತ್ತಲೇ ಕಲಾವಿದ ಗೌತಮ್ ಭಾರದ್ವಾಜ್ ಅವರು ಕನ್ನಡದ ಕ್ಲಾಸಿಕ್ ಹಿಟ್‌ಗಳಾದ ನಗುವಾ ನಯನಾ ಮಧುರಾ, ಮಿಡಿವಾ ಹೃದಯಾ, ಜೀವ ಹೂವಾಗಿದೆ, ಭಾವ ಜೇನಾಗಿದೆ ಎನ್ನುವ ಇಳಯರಾಜ ಸಂಗೀತದ ಹಾಡು, ಜೊತೆ ಜೊತೆಯಲಿ ಇರುವೆನು ಎಂದೂ…ಹಾಡುಗಳನ್ನು ಬೆರೆಸಿ ಮೆಡ್ಲೆ ಪ್ರಸ್ತುತಪಡಿಸಿದರು. ನಡುವೆ ಸೇರಿದ್ದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳೂ ಕ್ರಮಬದ್ಧವಾಗಿ ಜೊತೆ ಜೊತೆಯಲಿ ಹಾಡುವ ಮೂಲಕ ಭೇಷ್ ಎನ್ನಿಸಿಕೊಂಡರು.
ಉಳಿದಂತೆ ರೋಮಿಯೊ ರೋಮಿಯೊ…ಪರಮಸುಂದರಿ… ಝರಾ ಝರಾ ಕೋಯಿ ಹೋ ಸೊಹೋ, ಚಲೆ ಛಯ್ಯಛಯ್ಯ, ಇತ್ಯಾದಿ ಹಾಡಿದರೆ ವಿಕ್ರಾಂತ್ ರೋಣದ ಹಿಟ್ ಪಾರ್ಟಿ ಹಾಡು ರಾರಾ ರಕ್ಕಮ್ಮ ಮೂಲಕ ಪ್ರೇಕ್ಷಕರಿಗೆ ಖುಷಿಕೊಟ್ಟರು. “ಸಮಕಾಲೀನ ಶಾಸ್ತ್ರೀಯ’ ಹಾಡುಗಳ ಭಂಡಾರವನ್ನೇ ಸಿದ್ಧಿಸಿಕೊಂಡ ತಂಡ ಹಳೆಯ ಬಾಲಿವುಡ್ ಹಿಟ್ ಬರೇಲಿ ಕೇ ಬಾಜಾರ್ ಮೇ ಝುಮ್ಕಾ ಗಿರಾ ರೇ ಹಾಡನ್ನು ರಿಮಿಕ್ಸ್ ಮಾಡಿ ಮನಸೆಳೆದರು. ಸಿಂಬಾ ಸಿನೆಮಾದ ದಿಲ್ ದಢಕಾಯೆ.. ಲಡ್ಕೀ ಅಂಖ್ ಮಾರೇ ಮಾಸ್ ಹಾಡು ಹಾಕಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ಮುಖ್ಯವಾಗಿ ತಮಿಳು, ಕನ್ನಡ, ತೆಲುಗು ಅಲ್ಲದೆ ಒಂದೆರಡು ಪಂಜಾಬಿ, ಮಲಯಾಳಂ ಹಾಡುಗಳನ್ನೂ ಪ್ರಸ್ತುತಪಡಿಸಿದ ತಂಡ, ಡಾ| ರಾಜ್ ಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು, ಪುನೀತ್ ರಾಜ್ ಕುಮಾರ್ ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡುಗಳ ಮೂಲಕ ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆದುಕೊಂಡರು.
ಇದಕ್ಕೆ ಮೊದಲು ಕಲಾವಿದರನ್ನು ಬಯಲು ರಂಗಮಂದಿರದಿಂದ ವೇದಿಕೆಯ ವರೆಗೆ ಕರೆತಂದು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಆರೆಸ್ಸೆಸ್ ನಾಯಕ ಡಾ| ಕಲ್ಲಡ್ಕ ಪ್ರಬಾಕರ್ ಭಟ್ ದೀಪ ಬೆಳಗಿಸಿದರು. ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ, ಮೂಡುಬಿದಿರೆ ಜೈನ ಮಂದಿರದ ಡಾ| ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವ ದೀಪ ಬೆಳಗಿಸಿದರು.