ಮೂಡುಬಿದಿರೆ: ಆಳ್ವಾಸ್ ವಿರಾಸತ್-2018ರ ಅಂಗವಾಗಿ 16 ದಿನಗಳ “ಆಳ್ವಾಸ್ ಶಿಲ್ಪ ವಿರಾಸತ್’ ರಾಷ್ಟ್ರೀಯ ಶಿಲ್ಪ ಕಲಾವಿದರ ಶಿಬಿರವನ್ನು ಹಿರಿಯ ಶಿಲ್ಪಿ ಬೆಂಗಳೂರಿನ ಸೂರಾಲು ವೆಂಕಟರಮಣ ಭಟ್ ಉದ್ಘಾಟಿಸಿದರು.
ಶಿಲ್ಪಕಲೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ದೇವರು, ದೇವಸ್ಥಾನಗಳಲ್ಲದೆ ಇನ್ನೂ ವಿಭಿನ್ನ ಶೈಲಿಯ ಶಿಲ್ಪಕಲೆಗಳಿವೆ. ಅವುಗಳನ್ನು ಜನರಿಗೆ ಪರಿಚಯಿಸಬೇಕಾಗಿದೆ ಎಂದು ಅವರು ಹೇಳಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. “ಕಲೆಗಾರನಿಗೆ ಅವಕಾಶಗಳು ಬಹಳಷ್ಟಿವೆ. ಸ್ವಂತಿಕೆ ಮತ್ತು ಕ್ರಿಯಾಶೀಲತೆ ಬಳಸಿ ವಿಭಿನ್ನ ಶೈಲಿಯಲ್ಲಿ ಹೊಸತನ ರೂಪಿಸಿದರೆ ಖಂಡಿತ ಈ ಕಲೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅವರು ಹೇಳಿದರು.
ಈ ವರೆಗಿನ ಶಿಲ್ಪ ವಿರಾಸತ್ ಹಾಗೂ ವರ್ಣ ವಿರಾಸತ್‌ನಲ್ಲಿ ತಯಾರಾದ ಕಲಾಕೃತಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಂರಕ್ಷಿಸಿಡ ಲಾಗಿದೆ ಎಂದರು. ಶಿಲ್ಪ ವಿರಾಸತ್ ಸಲಹಾ ಸಮಿತಿ ಸದಸ್ಯರಾದ ಕೋಟಿಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತ ರಿದ್ದರು. ದೀಕ್ಷಾ ಗೌಡ ನಿರೂಪಿಸಿದರು.
31 ಶಿಲ್ಪಿಗಳು
ಜ. 6ರವರೆಗೆ ನಡೆಯಲಿರುವ ಶಿಲ್ಪ ವಿರಾಸತ್‌ನಲ್ಲಿ ಕರ್ನಾಟಕ ಮಾತ್ರವಲ್ಲದೆ, ದೂರದ ಛತ್ತೀಸ್‌ಗಢ, ಕೇರಳದಿಂದಲೂ ಆಗಮಿಸಿರುವ 31 ಶಿಲ್ಪಿಗಳು ಮರ, ಲೋಹ, ಕಂಚು, ಶಿಲೆ, ಟೆರ್ರಾಕೋಟಗಳಲ್ಲಿ ಸಾಂಪ್ರದಾಯಿಕ, ಜಾನಪದ ಹಾಗೂ ಸಮಕಾಲೀನ ಶೈಲಿಯ ಕಲಾಕೃತಿಗಳನ್ನು ರಚಿಸಲಿದ್ದಾರೆ.