Advertisement

ಸಾಮರ್ಥ್ಯ ಅರಿತು ಉದ್ಯೋಗ ರಂಗ ಪ್ರವೇಶಿಸಿ

10:09 AM Jun 22, 2019 | Team Udayavani |

ಮೂಡುಬಿದಿರೆ: ಉದ್ಯೋಗದಲ್ಲಿ ಮೇಲು ಕೀಳು ಎಂಬುದಿಲ್ಲ. ಪ್ರತಿಯೊಂದು ಕೆಲಸಕ್ಕೂ ಸಮಾಜದಲ್ಲಿ ಸ್ಥಾನಮಾನವಿದೆ. ಪ್ರತಿಯೊಬ್ಬರೂ ತಮ್ಮೊಳಗಿನ ಪ್ರತಿಭೆ ಏನೆಂಬುದನ್ನು ತಾವು ಮೊದಲು ತಿಳಿದುಕೊಂಡು ಅದಕ್ಕೆ ತಕ್ಕ ಉದ್ಯೋಗ ರಂಗವನ್ನು ಪ್ರವೇಶಿಸಿ ಮುಂದುವರಿದಾಗ ಪ್ರಗತಿ ಹೊಂದಲು ಸಾಧ್ಯ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ| ಸಚ್ಚಿದಾನಂದ ಹೇಳಿದರು.

Advertisement

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಆಯೋಜಿಸಲಾದ 11ನೇ ವರ್ಷದ ಆಳ್ವಾಸ್‌ ಪ್ರಗತಿ-2019 ಉದ್ಯೋಗ ಮೇಳವನ್ನು ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾ.ಗಾ. ವಿ.ವಿ. ಉದ್ಯೋಗ ಮೇಳ
ರಜತ ವರ್ಷದ ಸಂಭ್ರಮದಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ಗಳ ವಿ.ವಿ. ಉದ್ಯೋಗ ಮೇಳ ಏರ್ಪಡಿಸುವ ಮೂಲಕ ವಿ.ವಿ.ಯ ಮೆಡಿಕಲ್‌, ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ಚಿಂತನೆ ನಡೆಸಿದೆ; ಈ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶ, ವಿದೇಶಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪ್ರಕಟಿಸಿದರು.

ಭಾರತೀಯ ಅಭ್ಯರ್ಥಿಗಳಿಗೆ ಚೀನ, ಅಮೆರಿಕ, ಮಧ್ಯಪ್ರಾಚ್ಯ ಮೊದಲಾದ ದೇಶಗಳಲ್ಲಿ ಅಪಾರ ಬೇಡಿಕೆ ಇದೆ ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್‌ ಮಾತ ನಾಡಿ, ವಿದ್ಯಾರ್ಜನೆಯ ಜತೆಗೆ ತಮ್ಮ ಪ್ರತಿಭೆಗೆ ಸೂಕ್ತವಾದ ಉದ್ಯೋಗ ರಂಗವನ್ನು ಆಯ್ಕೆ ಮಾಡಿಕೊಳ್ಳ‌ಬೇಕು’ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ “ಕಲಿಕೆಯೊಂದಿಗೆ ಸಂವಹನಶೀಲತೆಯೇ ಮೊದಲಾದ ಕೌಶಲಗಳನ್ನೂ ಮೈಗೂಡಿಸಿಕೊಳ್ಳುವುದು ಅವಶ್ಯ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯಂ ಎಡಪಡಿತ್ತಾಯ, ಮಾಜಿ ಶಾಸಕ ಕೆ. ಅಭಯಚಂದ್ರ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.

Advertisement

ಆಳ್ವಾಸ್‌ ಎಜುಕೇಶನ್‌ ಫೌಂಡೇ ಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಸ್ತಾವನೆಗೈದರು. ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗ ಮುಖ್ಯಸ್ಥ ಪ್ರೊ| ಅಜಿತ್‌ ಹೆಬ್ಟಾರ್‌ ವಂದಿಸಿದರು. ಆಳ್ವಾಸ್‌ ಪ.ಪೂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ವೇಣುಗೋಪಾಲ್‌ ಶೆಟ್ಟಿ ನಿರೂಪಿಸಿದರು.

ವಾರ್ಷಿಕ 5.50 ಲಕ್ಷ ರೂ.
ಥಾಮಸ್‌ ರಾಯ್‌ಟರ್ ಕಂಪೆನಿಗೆ ವಾರ್ಷಿಕ 5.5 ಲಕ್ಷ ರೂ. ಪ್ಯಾಕೇಜ್‌ಗೆ ವಾಮಂಜೂರು ಸೈಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನ ಬಿ.ಇ. ಪದವೀಧರೆ ದೀಕ್ಷಿತಾ, ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಬಿ.ಇ. ಪದವೀಧರೆ ದೀಕ್ಷಾ ಶೆಟ್ಟಿ ಮತ್ತು ಎಸ್‌ಎಂವಿಐಟಿಎಂ ಕಾಲೇಜಿನ ನಿಶಾ, ವಾಮಂಜೂರು ಸೈಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನ ಲಾರ್ಸನ್‌ ಡಿ’ಸೋಜಾ ಆಯ್ಕೆಯಾಗಿದ್ದಾರೆ.

ಕೋರ್‌ ಕಂಪೆನಿಗಳಾದ ಥಾಮ್ಸನ್‌ ರಾಯಿಟರ್, ಇವೈ, ಮೈಂಡ್‌ಟ್ರಿ, ಎಂಫಸಿಸ್‌, ಪೆಟ್ರಕಾನ್‌, ಟಿಐಎಂಇಸಿ, ಸಿಂಜಿನ್‌, ಮ್ಯಾವೆಂಟಿಕ್‌, ಕೋಡ್‌ಕ್ರಾಫ್ಟ್‌ ಕಂಪೆನಿಗಳು ತಮ್ಮ ಪ್ರಮುಖ ವಲಯದ ಉದ್ಯೋಗವಕಾಶವನ್ನು ಮೊದಲ ದಿನವೇ ನೀಡಿದ್ದು, ಇನ್ನೂ ಹಲವು ಮುಖ್ಯ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ಎರಡನೇ ದಿನವಾದ ಶನಿವಾರ ನಡೆಸಲಿದೆ.

ಹಲವರ ಆಯ್ಕೆ
ಹೋಂಡ ಕಂಪೆನಿ ತನ್ನ ನರ್ಸಾಪುರದ ಕಾರ್ಖಾನೆಗೆ ಮೊದಲ ದಿನ 239 ಐಟಿಐ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅವರಿಗೆ ಸಂಬಳ, ಭತ್ತೆ, ಊಟ ವಸತಿಯ ಸೌಲಭ್ಯಗಳನ್ನು ಕಂಪೆನಿಯೇ ನೀಡಲಿದೆ. ಸುಳ್ಯದ ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐಯ 9 ಮಂದಿ ಕೀನೇಸ್‌ ಟೆಕ್ನಾಲಜಿ (2), ಎಲ್‌ಆ್ಯಂಡ್‌ಟಿ (2), ಹೊಂಡಾ (3) ಮತ್ತು ಎಬಿಎಫ್‌ (2) ಹೀಗೆ ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ.

*ಆನ್‌ಲೈನ್‌ ನೋಂದಣಿ: 11,837
*ಸ್ಥಳದಲ್ಲೇ ನೋಂದಣಿ: 892
*ಭಾಗವಹಿಸಿದ ಕಂಪೆನಿಗಳು: 208
*ಮೊದಲ ದಿನದ ಉದ್ಯೋಗಾಕಾಂಕ್ಷಿಗಳು: 8,021
*ಸ್ಥಳದಲ್ಲೇ ಆಯ್ಕೆ ಮಾಡಿದ ಕಂಪೆನಿಗಳು: 89
*ಸ್ಥಳದಲ್ಲೇ ಆಯ್ಕೆಯಾದವರು: 660
*ಮುಂದಿನ ಹಂತದ ಪ್ರಕ್ರಿಯೆಗೆ ಆಯ್ಕೆಯಾದವರು: 1,357

Advertisement

Udayavani is now on Telegram. Click here to join our channel and stay updated with the latest news.

Next