Advertisement

ಡಿಸೆಂಬರ್‌ 1 ರಿಂದ ಆಳ್ವಾಸ್‌ ನುಡಿಸಿರಿ ಸಂಭ್ರಮ

11:17 AM Nov 26, 2017 | Team Udayavani |

ಮಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವಾರ್ಷಿಕ ಆಚರಣೆಯಾಗಿ ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ, 14ನೇ ವರ್ಷದ ಆಳ್ವಾಸ್‌ ನುಡಿಸಿರಿಗೆ ಮೂಡುಬಿದಿರೆ ಸಜ್ಜುಗೊಂಡಿದೆ.

Advertisement

ಡಿ. 1ರಿಂದ 3ರ ವರೆಗೆ ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ, ಎಂ.ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ಆಳ್ವಾಸ್‌ ನುಡಿಸಿರಿ ವಿಜೃಂಭಣೆಯಿಂದ ಜರುಗಲಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನುಡಿಸಿರಿ ಕುರಿತು ವಿವರಿಸಿದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಡಿ. 1ರಂದು ಬೆಳಗ್ಗೆ 8.30ಕ್ಕೆ ಸಾಂಸ್ಕೃತಿಕ ಮೆರವಣಿಗೆಯನ್ನು ಮೂಲ್ಕಿ ಚರ್ಚ್‌ನ ಧರ್ಮಗುರುಗಳಾದ ಫಾ| ಎಫ್‌.ಎಕ್ಸ್‌. ಗೋಮ್ಸ್‌ ಉದ್ಘಾಟಿಸುವರು.

ನಿಟ್ಟೆ ವಿವಿ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಧ್ವಜಾರೋಹಣ ನೆರವೇರಿಸಲಿದ್ದು, ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ| ನಾಗತಿಹಳ್ಳಿ ಚಂದ್ರಶೇಖರ್‌ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಖ್ಯಾತ ವಿಮರ್ಶಕ ಡಾ| ಸಿ.ಎನ್‌. ರಾಮಚಂದ್ರನ್‌ ಉದ್ಘಾಟಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮನು ಬಳಿಗಾರ್‌ ಮುಖ್ಯ ಅತಿಥಿಗಳಾಗಿದ್ದು, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ , ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ,, ವಿಧಾನಪರಿಷತ್‌ ಪ್ರತಿಪಕ್ಷ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಗೌರವ ಉಪಸ್ಥಿತಿಯಿರುತ್ತದೆ ಎಂದರು.

Advertisement

ಆಳ್ವಾಸ್‌ ನುಡಿಸಿರಿ ಪುರಸ್ಕೃತರು: ಬಿಷಪ್‌ ರೈ.ರೆ. ಡಾ. ಹೆನ್ರಿ ಡಿ’ಸೋಜಾ, ಎಚ್‌.ಎಸ್‌. ದೊರೆಸ್ವಾಮಿ, ನಾಡೋಜ ಡಾ. ಎನ್‌. ಸಂತೋಷ್‌ ಹೆಗ್ಡೆ, ಡಾ. ತೇಜಸ್ವಿ ಕಟ್ಟಿàಮನಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ವಿಜಯಾ ದಬ್ಬೆ, ಪ್ರೊ. ಕೆ.ಬಿ. ಸಿದ್ದಯ್ಯ, ಪ್ರೊ. ಜಿ.ಎಚ್‌. ಹನ್ನೆರಡುಮಠ,

ಪ್ರೊ. ಬಿ.ಸುರೇಂದ್ರ ರಾವ್‌, ಡಾ. ಎಂ. ಪ್ರಭಾಕರ ಜೋಶಿ, ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌, ಪದ್ಮರಾಜ ದಂಡಾವತಿ, ರತ್ನಮಾಲಾ ಪ್ರಕಾಶ್‌, ಡಾ. ತೋನ್ಸೆ ವಿಜಯ ಕುಮಾರ್‌ ಶೆಟ್ಟಿ, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ಈ ಬಾರಿಯ ಆಳ್ವಾಸ್‌ ನುಡಿಸಿರಿ ಪುರಸ್ಕಾರ ಪ್ರದಾನ ಮಾಡಲಾಗುವುದು.

ಆಳ್ವಾಸ್‌ ಕೃಷಿಸಿರಿ: ಸಾಹಿತ್ಯ-ಸಂಸ್ಕೃತಿಗಳ ಜತೆಗೆ ಅನ್ನವನ್ನೂ, ಅನ್ನದಾತರನ್ನೂ ಗೌರವಿಸುವ ಆಳ್ವಾಸ್‌ ಕೃಷಿಸಿರಿಯನ್ನು ನ. 30ರಂದು ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಉದ್ಘಾಟಿಸುವರು.

ಕೋಣಗಳ ಸೌಂದರ್ಯ ಸ್ಪರ್ಧೆ: ಡಿ. 1ರಂದು ಸಂಜೆ 4.30ರಿಂದ 6ರವರೆಗೆ ಓಟದ ಕೋಣಗಳ ಸೌಂದರ್ಯ ಸ್ಪರ್ಧೆಯಿದ್ದು ವಿಜೇತ ಕೋಣಗಳಿಗೆ 50,000 ರೂ., 30,000 ಮತ್ತು 20,000 ರೂ. ಬಹುಮಾನಗಳಿವೆ. ಅಂತೆಯೇ ಕೋಣ ಓಡಿಸುವವರ ಸೌಂದರ್ಯ ಸ್ಪರ್ಧೆಯಿದ್ದು 10,000 ಮತ್ತು 7,000ರೂ. ಬಹುಮಾನಗಳನ್ನು ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next