ಮೂಡುಬಿದಿರೆ: ಮೂವತ್ತನೇ ಆಳ್ವಾಸ್ ವಿರಾಸತ್ 5 ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ 6 ದಿನವೂ ನಡೆದ ಮಹಾಮೇಳದೊಂದಿಗೆ ರವಿವಾರ ಸಮಾರೋಪಗೊಂಡಿತು. 6 ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿ ಸಾಂಸ್ಕೃತಿಕ ಹಬ್ಬದ ಖುಷಿಯನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ| Mohan ಆಳ್ವ ಹರ್ಷ
ಪ್ರತಿ ವರ್ಷದಂತೆ ಈ ವರ್ಷದ ವಿರಾಸತ್ ಕೂಡ ಸರ್ವ ಶ್ರೇಷ್ಠ ಸಾಂಸ್ಕೃತಿಕ ಉತ್ಸವವಾಗಿ ಮೂಡಿಬಂದಿದ್ದು, ದೇವರ ಹಾಗೂ ಪ್ರಕೃತಿಯ ಸಂಪೂರ್ಣ ಅನುಗ್ರಹ ವಿರಾಸತ್‌ನ ಯಶಸ್ಸಿಗೆ ಕಾರಣವಾಗಿದೆ. ಈ ಉತ್ಸವ ಎಲ್ಲ ವರ್ಗದವರು ಹಾಗೂ ಎಲ್ಲ ವಯೋಮಾನದವರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.
ಪಾಲ್ಗೊಂಡ ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ನಮಗೆ ಸಂಪೂರ್ಣ ತೃಪ್ತಿ ನೀಡಿದೆ. ಪ್ರತಿದಿನವೂ ಸುಮಾರು ಒಂದು ಲಕ್ಷದಂತೆ ಜನರು ಭಾಗವಹಿಸಿದರೆ, ಶನಿವಾರ ಹಾಗೂ ರವಿವಾರ ಜನಸ್ತೋಮ ಲಕ್ಷಕ್ಕೂ ಮೀರಿತ್ತು ಎಂದು ಡಾ| ಮೋಹನ ಆಳ್ವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಸರಾಸರಿ 1500ರಷ್ಟು ಸಹಿತ ಒಟ್ಟು 4 ಸಾವಿರಕ್ಕೂ ಅಧಿಕ ಕಲಾವಿದರಿಗೆ ವಿರಾಸತ್ ವೇದಿಕೆಯಾಯಿತು. ಸ್ವಚ್ಛತಾ ಸೇನಾನಿಗಳು ರಾತ್ರಿ ಹಗಲು ಕೆಲಸ ನಿರ್ವಹಿಸಿದ್ದು, ಕಾರ್ಯಕ್ರಮ ಮುಗಿದ ಕೂಡಲೇ ಇಡೀ ಆವರಣವನ್ನು ಸ್ವತ್ಛಗೊಳಿಸುತ್ತಿದ್ದುದು ವಿಶೇಷ.
ಸುಮಾರು 2000ಕ್ಕೂ ಅಧಿಕ ಮಂದಿ ವಿರಾಸತ್‌ಗಾಗಿ ದುಡಿದಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ನ 1500ರಷ್ಟು ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು ಎಂದು ಡಾ| ಆಳ್ವರು ತಿಳಿಸಿದ್ದಾರೆ.