ಮೂಡುಬಿದಿರೆ: ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ ಸಂಸ್ಕೃತಿಯ ಅಭಿರುಚಿಯನ್ನು ಮಕ್ಕಳಿಗೆ ಪರಿಚಯಿಸಬೇಕೆನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಈ ಆಳ್ವಾಸ್ ಸಂಸ್ಥೆಯ ಕೃಷಿಪರವಾದಂತಹ ಯೋಚನೆ ಶ್ಲಾಘನೀಯವಾದದ್ದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.
ಅವರು ಗುರುವಾರ ಮೂಡುಬಿದಿರೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನುಡಿಸಿರಿ ಅಂಗವಾಗಿ ವಿದ್ಯಾಗಿರಿಯ ಕೆಎಸ್ ಪುಟ್ಟಣ್ಣಯ್ಯ ಕೃಷಿ ಆವರಣದಲ್ಲಿನ ಆನಂದ ಬೋಳಾರ್ ವೇದಿಕೆಯಲ್ಲಿ ಆಳ್ವಾಸ್ ಕೃಷಿಸಿರಿಯನ್ನು ಉದ್ಘಾಟಿಸಿ ಮಾತನಾಡಿದರು.
ಅನೇಕ ತಳಿಗಳ ಬೆಳೆಗಳ ಪ್ರದರ್ಶನದ ಉನ್ನದ ಕಾರ್ಯ ಇಲ್ಲಿ ನಡೆದಿದೆ. ಯಾವುದೇ ಸರ್ಕಾರದ ಸಂಸ್ಥೆ ಮಾಡದ ಕೆಲಸವನ್ನು ಆಳ್ವರು ಮಾಡುತ್ತಿದ್ದಾರೆ. ಇವು ನಿಜಕ್ಕೂ ಮೆಚ್ಚುವಂತಹದದ್ದು ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಉಮಾನಾಥ ಕೋಟ್ಯಾನ್ ಮಾತನಾಡುತ್ತ, ಕೃಷಿ ನಮ್ಮ ದೇಶದ ಸಂಪತ್ತು ಎಂದು ಹೇಳುತ್ತ ಬಂದಿದ್ದೇವೆ, ನೋಡುತ್ತ ಬಂದಿದ್ದೇವೆ. ಆದರೆ ಡಾ.ಮೋಹನ್ ಆಳ್ವ ಅವರು ಕೃಷಿಯನ್ನು ಹೇಗೆ ಮಾಡಬೇಕೆಂದು ಮಾಡಿ ತೋರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಇವೆರಡೂ ಮೂಡುಬಿದಿರೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಕಾರ್ಯಕ್ರಮಗಳು. ಇಂತಹ ಛಲ ಮತ್ತು ಗುರಿ ಮುಟ್ಟುವ ಹಂಬಲ ಆಳ್ವರಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಆಳ್ವಾಸ್ ಪ್ರತಿಷ್ಠಾನದ ರೂವಾರಿ ಡಾ.ಎಂ.ಮೋಹನ್ ಆಳ್ವ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ರಾಜವರ್ಮಾ ಬೈಲಂಗಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಡಾ.ಎಂ.ಮೋಹನ್ ಆಳ್ವ ಅತಿಥಿಗಳನ್ನು ಸ್ವಾಗತಿಸಿದರು. ರಾಜವರ್ಮಾ ಬೈಲಂಗಡಿ ವಂದನಾರ್ಪಣೆ, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.