ಮೂಡುಬಿದಿರೆ: ಧಾರ್ಮಿಕ ಬಹುತ್ವಕ್ಕೆ, ಸಾಮರಸ್ಯಕ್ಕೆ ಕರ್ನಾಟಕ ಎಂದಿನಿಂದಲೂ ತೆರೆದುಕೊಂಡಿದೆ. ಧಾರ್ಮಿಕ ಸೌಹಾರ್ದತೆ ಒಂದು ಪ್ರದೇಶದಲ್ಲಿ ಬಹುತ್ವವನ್ನು ಉಳಿಸಿಕೊಂಡಿದೆಯೆಂದರೆ ಇದು ಯಾವ ಪರಂಪರೆ? ಇದು ಉಳಿದ ಪ್ರದೇಶಗಳಲ್ಲಿ ಏಕೆ ಕಾಣಿಸುತ್ತಿಲ್ಲ? ರಾಮ-ರಹೀಮರು ಕತ್ತಿ ಮಸೆಯುತ್ತಿರುವುದೇಕೆ? ಈ ಪ್ರಶ್ನೆಗಳನ್ನು ಪ್ರಾಂಜಲ ಮನಸ್ಸಿನಿಂದ ಚರ್ಚಿಸಬೇಕು ಎಂದು ಆಳ್ವಾಸ್ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಮಲ್ಲಿಕಾ ಎಸ್.ಘಂಟಿ ಅಭಿಪ್ರಾಯವ್ಯಕ್ತಪಡಿಸಿದರು.
ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 3 ದಿನಗಳ ಕಾಲ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮ್ಮೇನಾಧ್ಯಕ್ಷರ ನುಡಿಯನ್ನಾಡಿದರು.
ಅಮಾಯಕರ ರಕ್ತ ಬೀದಿಯಲ್ಲಿ ಬೀಳದಂತೆ ನೋಡುವ ಜವಾಬ್ದಾರಿ ಬರಹಗಾರರ ಮೇಲಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಎಲ್ಲಾ ದೇಶಗಳ ಶಾಂತಿಪ್ರಿಯ ಮನಸ್ಸುಗಳು ತಮ್ಮ ತಮ್ಮ ಶಕ್ತಿಗನುಗುಣವಾಗಿ ಮಾತನಾಡಿವೆ. ಚರಿತ್ರೆಯ ಪ್ರಮಾದ, ಗಾಯಗಳಿಗೆ ರಕ್ತ ಒಂದೇ ಮದ್ದಲ್ಲ. ಶಾಂತಿ, ಪ್ರೀತಿ, ನಂಬಿಕೆ ವಿಶ್ವಾಸವೂ ಗಾಯವನ್ನು ಗುಣಪಡಿಸುವ ಔಷಧಿಗಳು ಎಂಬ ನಂಬಿಕೆ ಮರೆಯಾದ ಹೊತ್ತಿನಲ್ಲಿ ನಮ್ಮ ಹೊಣೆಗಾರಿಕೆ ಬಗ್ಗೆ ಅರಿತುಕೊಳ್ಳಬೇಕಾಗಿದೆ ಎಂದರು.
ತಪ್ಪು ಮಾಡಿದಾಗ ಅದರ ಕುರಿತು ಮಾತನಾಡಬೇಕಾದವರು ಕವಿ, ಸಾಹಿತಿ, ಕಲಾವಿದರು. ನಮ್ಮಗಳ ಆತ್ಮವಿಮರ್ಶೆಯ ಕಾಲವಿದು. ಯಾರನ್ನೂ ದೂಷಿಸುವುದಲ್ಲ. ಕಾಲಕಾಲಕ್ಕೆ ಈ ಕವಿ, ಸಾಹಿತಿ, ಕಲಾವಿದರುಗಳು ಹೇಗೆ ನಡೆದುಕೊಂಡರು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.